🔸LOCAL EXPRESS :”ಗದಗ | ಮರ್ಯಾದೆ ಹತ್ಯೆ ಖಂಡಿಸಿ :  ಹೆದ್ದಾರಿ ತಡೆದು ದಲಿತಪರ ಸಂಘಟನೆಗಳಿಂದ ಪ್ರತಿಭಟನೆ”

By admin

🔸LOCAL EXPRESS :“ಗದಗ | ಮರ್ಯಾದೆ ಹತ್ಯೆ ಖಂಡಿಸಿ :  ಹೆದ್ದಾರಿ ತಡೆದು ದಲಿತಪರ ಸಂಘಟನೆಗಳಿಂದ  ಪ್ರತಿಭಟನೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗದಗ :

ಹುಬ್ಬಳ್ಳಿಯ ಇನಾಮ್ ವೀರಾಪುರ ಗ್ರಾಮದಲ್ಲಿ ದಲಿತ ಯುವಕ ವಿವೇಕಾನಂದ ಹರಿಜನ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿ ಗರ್ಭಿಣಿಯಾದ್ದ, ಮಾನ್ಯ ಪಾಟೀಲ ಯುವತಿಯ ಮರ್ಯಾದೆ ಹತ್ಯೆ ಖಂಡಿಸಿ, ಆರೋಪಿಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಆಗ್ರಹಿಸಿದರು.

ನಗರದ ಶಿವಾಜಿ ವೃತ್ತದಲ್ಲಿ ದಲಿತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ವಿವಿಧ ಜನಪರ ಸಂಘಟನೆಗಳ ಒಕ್ಕೂಟದಿಂದ ಅಂತರ್ಜಾತಿ ವಿವಾಹವಾಗಿದ್ದ ಹಾಗೂ ಗರ್ಭಿಣಿಯಾಗಿದ್ದ ಮಗಳನ್ನ ಹತ್ಯ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಹುಬ್ಬಳ್ಳಿ- ಸೊಲ್ಲಾಪುರ್ ರಾಷ್ಟ್ರಿಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ  ಅವರಿಗೆ ಮನವಿ ಪತ್ರ ಸಲ್ಲಿಸಿದರು.

ದಲಿತ ಮುಖಂಡರು ಹಾಗೂ ವಸಂತ ಜೋಗಣ್ಣವರ ಮಾತನಾಡಿ, “ಸಮಾಜದಲ್ಲಿ ಜಾತಿ ವ್ಯವಸ್ಥೆ ಇನ್ನೂ ಆಳವಾಗಿ ಬೇರು ಬಿಟ್ಟಿದೆ. ಇಂತಹ ಮರ್ಯಾದೆ ಹತ್ಯೆಗಳನ್ನು ತಡೆಯಲು ಕಾನೂನನ್ನು ಇನ್ನಷ್ಟು ಗಟ್ಟಿಗೊಳಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು.
ಡಿಎಸ್ಎಸ್ ತಾಲ್ಲೂಕು ಸಂಚಾಲಕ ದತ್ತಾತ್ರೇಯ ಜೋಗಣ್ಣವರ ಮಾತನಾಡಿ, “ಜಾತಿ ಇಲ್ಲ ಎಂದು ಹೇಳುವುದು ಸಾಮಾನ್ಯವಾದರೂ, ಅದನ್ನು ಪಾಲಿಸುವವರು ವಿರಳ. ತಂದೆಯೇ ತನ್ನ ಸ್ವಂತ ಮಗಳನ್ನು ಕೊಲ್ಲುವ ಮನಸ್ಥಿತಿಗೆ ಕಾರಣವಾಗಿರುವುದು ಜಾತಿ ವ್ಯವಸ್ಥೆಯೇ. ಗರ್ಭಿಣಿ ಯುವತಿಯನ್ನು ಕೊಂದಿರುವುದು ಅಮಾನವೀಯ ಮತ್ತು ಹೇಯ ಕೃತ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಹೋರಾಟಗಾರ ವಿಜಯ ಛಲವಾದಿ, “ದಲಿತ ಸಮುದಾಯದವರೊಂದಿಗೆ ಸಂಬಂಧ ಹೊಂದಿದರೆ ಈ ರೀತಿಯ ವಿಕೃತ ಚಿಂತನೆ ಹುಟ್ಟುವುದು ನೋವಿನ ಸಂಗತಿ. ಇಂತಹ ಘಟನೆಗಳು ನಿಲ್ಲದಿದ್ದರೆ ಅದು ಮನುಕುಲಕ್ಕೆ ಅವಮಾನ” ಎಂದರು.

ದಲಿತ ಯುವ ಮುಖಂಡ ಗುರುನಾಥ ಕೆಂಗಾರಕರ ಮಾತನಾಡಿ, “ಬುದ್ಧ, ಬಸವ, ಅಂಬೇಡ್ಕರ್ ಸಮಾನತೆಗಾಗಿ ಹೋರಾಡಿದ ನಾಯಕರು. ಅವರ ಆಶಯಗಳಿಗೆ ವಿರುದ್ಧವಾದ ಈ ಕೃತ್ಯ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ, ಅಗತ್ಯವಿದ್ದರೆ ಮರಣದಂಡನೆಯನ್ನೂ ವಿಧಿಸಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಫ್.ವೈ. ದೊಡ್ಡಮನಿ, ಡಾ. ಮುತ್ತು ಸುರಕೋಡ, ಯಶವಂತ ಛಲವಾದಿ, ದುರಗಪ್ಪ ಜೋಗಣ್ಣವರ, ಸಣ್ಣದುರ್ಗಪ್ಪ ದಂಡಾಪುರ, ಪುನೀತ ಜೋಗಣ್ಣವರ, ವಿಕ್ರಂ ಹೊನ್ನಕೇರಿ, ಪ್ರಶಾಂತ್ ತಡಸಿ, ಕಿರಣ ಜೋಗಣ್ಣವರ, ನಬಿಸಬಾ ಕಿಲ್ಲದಾರ, ವಿಜಯ್ ಬಡಿಗೇರ, ಶರಣು ಛಲವಾದಿ, ಖಾಜು ಕಿಲ್ಲೆದಾರ್, ನವೀನ್ ಜೋಗಣ್ಣವರ, ಮಾಂತೇಶ ಪೂಜಾರ, ಸಿದ್ದು ಕೆಲಗೇರಿ, ಮುತ್ತು ಪೂಜಾರ, ಪ್ರವೀಣ ಬಾಂಗಿ, ರವಿ ಚಿಂತಾಲ್, ಹಸನ ಮೇಸ್ತ್ರಿ, ಶ್ರೀಕಾಂತ ಜೋಗಣ್ಣವರ, ಅರ್ಜುನ ಮಾದರ ಸೇರಿದಂತೆ ಅನೇಕರು ಭಾಗವಹಿಸಿದ್ದರು.