ತಾಲೂಕಿನ ಗಡಿಭಾಗದ ಗ್ರಾಮಗಳಲ್ಲಿ ನಿಷೇಧಿತ ಕೋಳಿ ಪಂದ್ಯಗಳು (ಕೋಳಿ ಕಾಳಗ) ನಿರಂತರವಾಗಿ ನಡೆಯುತ್ತಿದ್ದು, ಇದು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗುತ್ತಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ–1960ರ ಸೆಕ್ಷನ್ 3ರ ಪ್ರಕಾರ ಕೋಳಿಗಳನ್ನು ಪಂದ್ಯಾಟದಲ್ಲಿ ತೊಡಗಿಸುವಂತಿಲ್ಲ .ಆದರೆ ಪಂದ್ಯ ಸಂಪೂರ್ಣವಾಗಿ ನಿಷಿದ್ಧವಾಗಿದ್ದರೂ, ಜನರ ಆಸಕ್ತಿ ಹಾಗೂ ಹಣದ ಬೆಟ್ಟಿಂಗ್‌ನಿಂದಾಗಿ ಈ ಅಕ್ರಮ ಚಟುವಟಿಕೆ ವ್ಯಾಪಕವಾಗಿ ನಡೆಯುತ್ತಿದೆ.
ಈ ನಡುವೆಯೇ ತಾಲೂಕಿನ ಕರಡೋಣಿ ಸೀಮೆಯ ಗುಡ್ಡ ಪ್ರದೇಶದಲ್ಲಿ ನಡೆಯುತ್ತಿದ್ದ ಕೋಳಿ ಪಂದ್ಯದ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ₹5,100 ನಗದು ಹಣ ಹಾಗೂ 2 ಹುಂಜಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಳಿ ಪಂದ್ಯವನ್ನು ಆಯೋಜಿಸಿ ಆಡಿಸುತ್ತಿದ್ದ ಐದು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕನಕಗಿರಿ ಸುತ್ತಮುತ್ತಲಿನ ಹಲವೆಡೆ ರಹಸ್ಯವಾಗಿ ಕೋಳಿ ಪಂದ್ಯಗಳು ನಡೆಯುತ್ತಿದ್ದು, ಪೊಲೀಸರು ಕಾಲಕಾಲಕ್ಕೆ ದಾಳಿ ನಡೆಸಿ ಜೂಜಾಡುವವರನ್ನು ಬಂಧಿಸುತ್ತಿದ್ದಾರೆ. ಕಾರ್ಯಾಚರಣೆ ವೇಳೆ ಮೊಬೈಲ್‌ಗಳು, ಹಣ ಹಾಗೂ ಕೋಳಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದರೂ, ಈ ಅಕ್ರಮ ಚಟುವಟಿಕೆಗೆ ಪೂರ್ಣ ಕಡಿವಾಣ ಬೀಳುತ್ತಿಲ್ಲ.
ಪಂದ್ಯದ ವೇಳೆ ದೊಡ್ಡ ಮೊತ್ತದ ಹಣದ ಬೆಟ್ಟಿಂಗ್ ನಡೆಯುತ್ತಿದ್ದು, ಹಣದ ವಿಚಾರವಾಗಿ ಕೆಲ ಸಂದರ್ಭಗಳಲ್ಲಿ ಗುಂಪುಗಳ ನಡುವೆ ಗಲಾಟೆ ಹಾಗೂ ಹೊಡೆದಾಟಗಳೂ ಸಂಭವಿಸುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ.
ಒಟ್ಟಾರೆ, ಕನಕಗಿರಿ ಸುತ್ತಮುತ್ತ ನಡೆಯುತ್ತಿರುವ ಕೋಳಿ ಪಂದ್ಯಗಳು ನಿಷೇಧಿತ ಜೂಜು ಚಟುವಟಿಕೆಯಾಗಿದ್ದು, ನಿಯಮಗಳಿದ್ದರೂ ಸ್ಥಳೀಯವಾಗಿ ಇದು ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಪೊಲೀಸ್ ಕ್ರಮಗಳ ಜೊತೆಗೆ ಸಾರ್ವಜನಿಕ ಜಾಗೃತಿಯ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.