BREKING NEWS : “ಕೊಪ್ಪಳ| ಕೆಆರ್‌ಐಡಿಎಲ್‌ನಲ್ಲಿನ  ಭ್ರಷ್ಟಾಚಾರ ಪ್ರಕರಣ: ಮಾಜಿ ಎಂಜಿನಿಯರ್‌, ಗುತ್ತಿಗೆದಾರ ಬಂಧನ!”

By admin

🔴  BREKING NEWS : “ಕೊಪ್ಪಳ| ಕೆಆರ್‌ಐಡಿಎಲ್‌ನಲ್ಲಿನ  ಭ್ರಷ್ಟಾಚಾರ ಪ್ರಕರಣ: ಮಾಜಿ ಎಂಜಿನಿಯರ್‌, ಗುತ್ತಿಗೆದಾರ ಬಂಧನ!

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ :

   ಇಲ್ಲಿನ ಕೆಆರ್‌ಐಡಿಎಲ್‌ನಲ್ಲಿನ   ನಡೆದಿರುವ ₹72 ಕೋಟಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಮಾಜಿ ಕಾರ್ಯನಿರ್ವಾಹಕ ಎಂಜಿನಿಯರ್ ಝರಣಪ್ಪ ಎಂ. ಚಿಂಚೋಳಿಕರ್ ಹಾಗೂ ಗುತ್ತಿಗೆದಾರ ದೇವರಾಜ್ ರೇಷ್ಮೆ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ಮೂಲದ ಝರಣಪ್ಪ ಎಂ. ಚಿಂಚೋಳಿಕರ್ ಅವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿದ್ದರು. ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಅವರನ್ನು ಅಮಾನತುಗೊಳಿಸಲಾಗಿದ್ದು, ಬಳಿಕ ಸೇವೆಯಿಂದ ವಜಾಗೊಳಿಸಲಾಗಿತ್ತು.

ಯಲಬುರ್ಗಾ ಕ್ಷೇತ್ರದಲ್ಲಿ 2016–18ರ ಅವಧಿಯಲ್ಲಿ ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳದೇ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಅವರು 2020ರಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್‌ಗಳ ನೇತೃತ್ವದಲ್ಲಿ ಪಂಚನಾಮೆ ಸಮಿತಿ ರಚಿಸಿ ತನಿಖೆ ನಡೆಸಲಾಗಿತ್ತು.

ಈ ಪ್ರಕರಣದ ತನಿಖೆ ವೇಳೆ ಎರಡು ವರ್ಷಗಳ ಹಿಂದೆ ಚಿಂಚೋಳಿಕರ್ ಅವರ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಕೆಆರ್‌ಐಡಿಎಲ್‌ನಲ್ಲಿ ನಡೆದಿರುವ ₹72 ಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿಯೂ ಅವರ ಪಾತ್ರವಿರುವ ಆರೋಪದಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಮುಂದುವರಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿನಲ್ಲಿ ಝರಣಪ್ಪ ಎಂ. ಚಿಂಚೋಳಿಕರ್ ಹಾಗೂ ಗುತ್ತಿಗೆದಾರ ದೇವರಾಜ್ ರೇಷ್ಮೆ ಅವರನ್ನು ಬಂಧಿಸಿದರು.

ಬಳಿಕ ಕೊಪ್ಪಳದ ನ್ಯಾಯಾಲಯಕ್ಕೆ ಹಾಜರುಪಡಿಸಿದ ನ್ಯಾಯಾಲಯವು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.