🔵LOCAL NEWS :”ಯಲಬುರ್ಗಾ | ವಿಧಾನಸಭಾ   ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಹಂತ; ಶೇ.100 ಎನುಮರೇಶನ್ ಫಾರಂ ವಿತರಣೆ; ಕುಕನೂರಿನಲ್ಲಿ 85,587 ಮತದಾರರ ಮಾಹಿತಿ ದೃಢೀಕರಣ!”

By admin

    🔴LOCAL NEWS   :”ಯಲಬುರ್ಗಾ | ವಿಧಾನಸಭಾ   ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಹಂತ; ಶೇ.100 ಎನುಮರೇಶನ್ ಫಾರಂ ವಿತರಣೆ; ಕುಕನೂರಿನಲ್ಲಿ 85,587 ಮತದಾರರ ಮಾಹಿತಿ ದೃಢೀಕರಣ!”

> ಮತದಾರರ ಪಟ್ಟಿಯಲ್ಲಿ 26,467 ಎಎಸ್‌ಡಿಡಿ ಪ್ರಕರಣಗಳು!
ಆಗಸ್ಟ್‌ 8ರವರೆಗೆ ಪರಿಶೀಲನೆಗೆ ಅವಕಾಶ; ಸಾರ್ವಜನಿಕರ ಸಹಕಾರಕ್ಕೆ ತಹಶೀಲ್ದಾರ್ ಮನವಿ!

♦ ವಿಶೇಷ ವರದಿ : 

✍️ಭೀಮಾಶಂಕರ ಪಾಣೇಗಾಂವ.

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರ

ಯಲಬುರ್ಗಾ/ಕುಕನೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 63–ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಕಾರ್ಯ ಅಂತಿಮ ಹಂತ ತಲುಪಿದೆ. ಕ್ಷೇತ್ರದಾದ್ಯಂತ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆ–ಮನೆಗೆ ಭೇಟಿ ನೀಡಿ ಎನುಮರೇಶನ್ ಫಾರಂ ವಿತರಣೆ ಪೂರ್ಣಗೊಳಿಸಿದ್ದು, ಸಂಗ್ರಹಿಸಿದ ಮಾಹಿತಿಯ ಡಿಜಿಟಲೀಕರಣ ಮತ್ತು ಪರಿಶೀಲನೆ ಕಾರ್ಯ ಚುರುಕುಗೊಂಡಿದೆ.

ಕ್ಷೇತ್ರದಲ್ಲಿ ಒಟ್ಟು 2,32,622 ಮತದಾರರು ಹಾಗೂ 256 ಮತಗಟ್ಟೆಗಳಿವೆ. ಜೂನ್‌ 30ರಿಂದ ಆರಂಭವಾದ ವಿಶೇಷ ಅಭಿಯಾನದಲ್ಲಿ ಎಲ್ಲ ಮತದಾರರಿಗೆ ಎನುಮರೇಶನ್ ಫಾರಂಗಳನ್ನು ವಿತರಿಸಲಾಗಿದ್ದು, ಜುಲೈ 31ರ ಸಂಜೆ 4 ಗಂಟೆಯವರೆಗೆ ಶೇ.100ರಷ್ಟು ವಿತರಣೆ ಪೂರ್ಣಗೊಂಡಿದೆ. ಇದುವರೆಗೆ 2,06,155 (ಶೇ.88.62) ನಮೂನೆಗಳನ್ನು ಡಿಜಿಟಲೀಕರಿಸಿ ಅಪ್‌ಲೋಡ್ ಮಾಡಲಾಗಿದ್ದು, ಉಳಿದ ನಮೂನೆಗಳ ಡಿಜಿಟಲೀಕರಣ ಕಾರ್ಯ ಆಗಸ್ಟ್‌ 8ರೊಳಗೆ ಪೂರ್ಣಗೊಳ್ಳಲಿದೆ.

ಪರಿಶೀಲನೆ ವೇಳೆ 26,467 (ಶೇ.11.38) ಮತದಾರರನ್ನು ಎಎಸ್‌ಡಿಡಿ (ASDD) ವಿಭಾಗದಲ್ಲಿ ಗುರುತಿಸಲಾಗಿದೆ. ಇವರಲ್ಲಿ 15,591 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 5,758 ಮಂದಿ ಮೃತಪಟ್ಟವರು, 3,275 ಮಂದಿ ಡಬಲ್ ನೋಂದಣಿ ಹೊಂದಿರುವವರು ಹಾಗೂ 1,796 ಮಂದಿ ಗೈರು ಮತದಾರರಾಗಿದ್ದಾರೆ. ಈ ಎಲ್ಲ ಪ್ರಕರಣಗಳನ್ನು ಮತಗಟ್ಟೆವಾರು ಪರಿಶೀಲಿಸಿ ಅಂತಿಮ ಮತದಾರರ ಪಟ್ಟಿಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಲಾಗುತ್ತಿದೆ.

ಕ್ಷೇತ್ರ ವ್ಯಾಪ್ತಿಯ ಕುಕನೂರು ತಾಲ್ಲೂಕಿನಲ್ಲಿ ಒಟ್ಟು 96,248 ಮತದಾರರಿದ್ದು, 80,860 ಮಂದಿ ಗ್ರಾಮೀಣ ಹಾಗೂ 15,388 ಮಂದಿ ನಗರ ಪ್ರದೇಶದವರಾಗಿದ್ದಾರೆ. ತಾಲ್ಲೂಕಿನ ಎಲ್ಲ ಮತದಾರರ ಮನೆಗಳಿಗೆ ಎನುಮರೇಶನ್ ಫಾರಂಗಳನ್ನು ವಿತರಿಸಿ ಮಾಹಿತಿ ಸಂಗ್ರಹ ಕಾರ್ಯ ಪೂರ್ಣಗೊಂಡಿದ್ದು, 85,587 ಮತದಾರರ ಮಾಹಿತಿಯನ್ನು ದೃಢೀಕರಿಸಲಾಗಿದೆ.

ಕುಕನೂರು ತಾಲ್ಲೂಕಿನ ಪರಿಶೀಲನೆಯಲ್ಲಿ 2,341 ಮಂದಿ ಮೃತಪಟ್ಟಿರುವುದು, 6,052 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 803 ಮಂದಿ ಗೈರು ಮತದಾರರಾಗಿರುವುದು, 1,451 ಡಬಲ್ ಎಂಟ್ರಿ ಪ್ರಕರಣಗಳು ಹಾಗೂ 14 ಇತರೆ ಪ್ರಕರಣಗಳು ಪತ್ತೆಯಾಗಿವೆ. ಈ ಮಾಹಿತಿಯನ್ನು ಆಧರಿಸಿ ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರಗೊಳಿಸುವ ಕಾರ್ಯ ಮುಂದುವರಿದಿದೆ.

ಸ್ಥಳಾಂತರ, ಮರಣ, ಡಬಲ್ ನೋಂದಣಿ ಹಾಗೂ ಗೈರು ಮತದಾರರ ಪಟ್ಟಿಯನ್ನು ಸಂಬಂಧಿತ ಬಿಎಲ್‌ಒಗಳು ಹಾಗೂ ರಾಜಕೀಯ ಪಕ್ಷಗಳ ಬಿಎಲ್‌ಎ–2 ಪ್ರತಿನಿಧಿಗಳಿಗೆ ಈಗಾಗಲೇ ನೀಡಲಾಗಿದೆ. ಮತಗಟ್ಟೆವಾರು ಪರಿಶೀಲನೆ ನಡೆಸಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿತ ತಹಶೀಲ್ದಾರ್ ಕಚೇರಿಗೆ ಸಲ್ಲಿಸಲು ಅವಕಾಶವಿದೆ.
ಆಗಸ್ಟ್‌ 8ರವರೆಗೆ ಅವಕಾಶ: ಬೂತ್ ಮಟ್ಟದ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿಯ ಪರಿಶೀಲನೆ ಹಾಗೂ ಅಗತ್ಯ ತಿದ್ದುಪಡಿಗಳಿಗೆ ಆಗಸ್ಟ್‌ 8ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಅಥವಾ ಇತರೆ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಬಿಎಲ್‌ಒ ಅಥವಾ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ವಂಚಿತರಾಗದಂತೆ ಸಾರ್ವಜನಿಕರು ಬೂತ್ ಮಟ್ಟದ ಅಧಿಕಾರಿಗಳಿಗೆ ಸಹಕರಿಸಬೇಕು. ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ವಿಳಾಸ ಬದಲಾವಣೆ ಅಗತ್ಯವಿದ್ದರೆ ಕೂಡಲೇ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಹೆಲ್ಪ್‌ಲೈನ್ 08534-220130 ಅನ್ನು ಸಂಪರ್ಕಿಸಬಹುದು” ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಗ್ರೇಡ್–1 ತಹಶೀಲ್ದಾರ್ ಗಳು ತಿಳಿಸಿದ್ದಾರೆ.

“ಎಸ್‌ಐಆರ್–2026ರ ಸಂಬಂಧ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿದ್ದರೂ ಮಾತ್ರಕ್ಕೆ ಯಾವುದೇ ಮತದಾರರ ಹೆಸರನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ. ಆದರೆ, ಸ್ವೀಕೃತ ಗಣತಿ ನಮೂನೆಯನ್ನು ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಿ ನಿಗದಿತ ಅವಧಿಯೊಳಗೆ ಸಲ್ಲಿಸುವುದು ಕಡ್ಡಾಯ. ಮ್ಯಾಪಿಂಗ್ ಆಗದ ಮತದಾರರು ನಮೂನೆಯ ಕೊನೆಯ ಕಾಲಂ ಅನ್ನು ಭರ್ತಿ ಮಾಡಿ ಸಹಿಯೊಂದಿಗೆ ಸಲ್ಲಿಸಿದರೆ ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಮುಂದುವರಿಯಲಿದೆ. ಸಾರ್ವಜನಿಕರು ಈ ಬಗ್ಗೆ ಆತಂಕಪಡದೆ ನಿಗದಿತ ಅವಧಿಯೊಳಗೆ ನಮೂನೆ ಸಲ್ಲಿಸಬೇಕು.”
– ಬಸವರಾಜ ನಾಸಿ, ಗ್ರೇಡ್–1 ತಹಶೀಲ್ದಾರ್, ಯಲಬುರ್ಗಾ.

———————————————————————–

“ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಅಂಗವಾಗಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆ–ಮನೆಗೆ ಭೇಟಿ ನೀಡಿ ಸಂಗ್ರಹಿಸಿರುವ ಮಾಹಿತಿಯ ಪರಿಶೀಲನೆಗೆ ಆಗಸ್ಟ್‌ 8ರವರೆಗೆ ಅವಕಾಶ ಕಲ್ಪಿಸಲಾಗಿದೆ. ಸ್ಥಳಾಂತರ, ಮರಣ, ಡಬಲ್ ನೋಂದಣಿ, ಗೈರು ಮತದಾರರು ಸೇರಿದಂತೆ ಯಾವುದೇ ಮಾಹಿತಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಅಥವಾ ತಿದ್ದುಪಡಿ ಇದ್ದಲ್ಲಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಬಿಎಲ್‌ಒ ಅಥವಾ ಸಂಬಂಧಿತ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಅರ್ಹ ಮತದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.”
– ಬಸವರಾಜ ಬೆಣ್ಣೆಶಿರೂರು, ಗ್ರೇಡ್–1 ತಹಶೀಲ್ದಾರ್, ಕುಕನೂರು.