KOPPAL NEWS : “ಕೊಪ್ಫಳ| ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ  : ಗಾಂಧೀಜಿ ಅವರು ಸ್ವಚ್ಛತೆ, ಸರಳತೆಗೆ ಒತ್ತು  ನೀಡಿದ್ದರು.!  ಡಿ.ಸಿ. ಡಾ. ಸುರೇಶ ಬಿ. ಇಟ್ನಾಳ ಅಭಿಮತ”

By admin

“ಕೊಪ್ಫಳ| ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ  :  ಗಾಂಧೀಜಿ ಅವರು ಸ್ವಚ್ಛತೆ, ಸರಳತೆಗೆ ಒತ್ತು  ನೀಡಿದ್ದರು.!  ಡಿ.ಸಿ. ಡಾ. ಸುರೇಶ ಬಿ. ಇಟ್ನಾಳ ಅಭಿಮತ”

• ಸೆಕ್ಯೂಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :

ಕೊಪ್ಪಳ   : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯ, ಶಾಂತಿ, ಅಹಿಂಸೆಯ ಮಾರ್ಗಗಳ ಜೊತೆಗೆ ಸ್ವಚ್ಛತೆ, ಸರಳತೆಗೂ ಮಹತ್ವ ನೀಡಿದ್ದರು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಹೇಳಿದರು.

ಅವರು ಗುರುವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ತರಬೇತಿ ಕೇಂದ್ರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ ಎಂದಾಕ್ಷಣ ಸ್ವಾವಲಂಭನೆ, ಸ್ವದೇಶಿ ವಸ್ತುಗಳ ಬಳಕೆಗೆ ಉತ್ತೇಜನ. ಬಡವರ, ಮಹಿಳೆಯರ, ದೀನ ದಲಿತರ ಉದ್ದಾರ. ವಿದ್ಯಾರ್ಥಿಗಳ ಕಲಿಕೆ ಮತ್ತು ಸ್ವಚ್ಛತೆಯೇ ಸೇವೆ. ಹೀಗೆ ಹಲವಾರು ಅಂಶಗಳು ನಮ್ಮ ಮುಂದೆ ಬರುತ್ತವೆ. ಗ್ರಾಮೀಣ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸ್ವಾವಲಂಭನೆಯ ಧೇಯ ಉದ್ದೇಶವನ್ನಿಟ್ಟುಕೊಂಡು ಗ್ರಾಮ ಸ್ವರಾಜ್ ಆಗಬೇಕೆಂಬುವುದು ಗಾಂಧೀಜಿಯವರ ಆಶಯವಾಗಿತ್ತು. ಪಂಚಾಯತ್ ರಾಜ್ ಕಾಯ್ದೆಯನ್ನು ಬದಲಾವಣೆ ಮಾಡಿ, ಗ್ರಾಮ ಸ್ವರಾಜ್ ಕಾಯ್ದೆಯನ್ನಾಗಿಸಲಾಗಿದೆ. ಗ್ರಾಮ ಸ್ವರಾಜ್ಯ, ಸತ್ಯಾಗ್ರಹ, ಚಳುವಳಿಯಂತ ಗಾಂಧೀಜಿಯವರ ಪರಿಕಲ್ಪನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಕೊಪ್ಪಳದ  ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜಮದಾರ ಅವರು ಗಾಂಧೀಜಿಯವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಹಾತ್ಮಾ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಪಾಲನೆ ಮಾಡಿ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದರು. ತಮ್ಮ ಬದುಕಿನಲ್ಲಿ ಸರಳತೆಯನ್ನ ರೂಢಿಸಿಕೊಂಡಿದ್ದರು. ಅವರ ಹೋರಾಟ, ಸತ್ಯಾಗ್ರಹವು ನಮಗೆಲ್ಲರಿಗೂ ಮಾದರಿಯಾಗಿದೆ. ಗಾಂಧೀಜಿಯವರು ಮಹಿಳೆಯರಿಗೂ ಮಹತ್ವ ನೀಡುತ್ತಿದ್ದರು. ದೀನ ದಲಿತರಗೆ ಹಾಗೂ ಹಳ್ಳಿಗಳನ್ನು ಮತ್ತು ಹಳ್ಳಿಯ ಜನರನ್ನು, ಕೃಷಿಕರನ್ನು ತುಂಬಾ ಪ್ರೀತಿಸುತ್ತಿದ್ದರು. ಎಲ್ಲರನ್ನು ಸಮಭಾವದಿಂದ ಕಾಣುವಂತಹ ವ್ಯಕ್ತಿ ಅವರಾಗಿದ್ದರು ಎಂದರು.

• ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ:

ಮಹಾತ್ಮ ಗಾಂಧೀಜಿ ಜಯಂತಿ ನಿಮಿತ್ತ ವಾರ್ತಾ ಇಲಾಖೆಯಿಂದ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

• ಗಾಂಧೀ ಭಜನೆ : ಕೊಪ್ಪಳ ಜಿಲ್ಲೆಯ ಕಲಾವಿದರಾದ ಭಾಷು ಕಿನ್ನಾಳ ಹಾಗೂ ತಂಡದವರು ಗಾಂಧೀಜಿಯವರಿಗೆ ಪ್ರೀಯವಾಗಿದ್ದ ಭಜನೆಗಳನ್ನು ಹಾಡಿದರು. ಕೊಪ್ಪಳ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಕಾರ್ಯಕ್ರಮ ನಿರೂಪಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಜಿ. ಸುರೇಶ ಅವರು ಸ್ವಾಗತಿಸಿದರು.

ಸಮಾರಂಭದಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಪದವಿ ಪರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ ಮಲ್ಲಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ ಸೇರಿದಂತೆ ಇತರೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.