LOCAL EXPRESS : “ಯಾದಗಿರಿ | ಅವೈಜ್ಞಾನಿಕ, ಮಾರಕ ಜಾಹೀರಾತು ನೀತಿ ಕೈಬಿಡಿ: ಸಿಎಂಗೆ ಜಿಲ್ಲಾ ಸಂಪಾದಕರ ಸಂಘ ಒತ್ತಾಯ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ:
ರಾಜ್ಯದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಬೆಳವಣಿಗೆಗೆ ಮಾರಕವಾಗುವ ಅಂಶಗಳನ್ನು ಒಳಗೊಂಡಿರುವ ಕರ್ನಾಟಕ ಜಾಹೀರಾತು ನೀತಿ–2026 ಜಾರಿಗೆ ತಡೆ ನೀಡಿ, ಹಿಂದಿನ 2013ರ ನೀತಿಯನ್ನು ಮುಂದುವರಿಸುವಂತೆ ಮುಖ್ಯಮಂತ್ರಿಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಿಕೆಗಳ ಸಂಪಾದಕರ ಸಂಘ (ರಿ) ಜಿಲ್ಲಾ ಘಟಕ ಮನವಿ ಸಲ್ಲಿಸಿದೆ.
ಈ ಕುರಿತು ಅಪರ ಜಿಲ್ಲಾಧಿಕಾರಿಗಳ ಮೂಲಕ ಸಿ. ಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಸಿದ್ದಪ್ಪ ಲಿಂಗೇರಿ, 2026–27ನೇ ಹಣಕಾಸು ವರ್ಷದಿಂದ ಜಾರಿಗೊಳಿಸಲು ಸಿದ್ಧಪಡಿಸಿರುವ ಜಾಹೀರಾತು ನೀತಿಯಲ್ಲಿ ಅನೇಕ ಅಂಶಗಳು ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಬೆಳವಣಿಗೆಗೆ ತೀವ್ರ ಹಾನಿ ಉಂಟುಮಾಡಲಿವೆ ದಶಕಗಳಿಂದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಪತ್ರಿಕೆಗಳು ಮುಚ್ಚುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ . ಸಣ್ಣ ಪತ್ರಿಕೆಗಳ ಹಿತಾಸಕ್ತಿಯನ್ನು ಸಂಪೂರ್ಣ ನಿರ್ಲಕ್ಷಿಸಿ, ಸಂಪಾದಕರ ಸಂಘಟನೆಗಳ ಅಭಿಪ್ರಾಯ ಪಡೆಯದೇ ಏಕಪಕ್ಷೀಯವಾಗಿ ನೀತಿ ರೂಪಿಸಲಾಗಿದೆ . ಮಾಧ್ಯಮ ಸಮಿತಿಗೆ ಹೆಚ್ಚುವರಿಯಾಗಿ ಸೇರಿಸಿರುವ ಕಾರ್ಮಿಕ ಇಲಾಖೆ ಅಧಿಕಾರಿ ಹಾಗೂ ವಿದ್ಯುತ್ ವಿತರಣಾ ಸಂಸ್ಥೆಯ ಅಧಿಕಾರಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಕೋವಿಡ್ ಪರಿಣಾಮ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದ ಸಂಕಷ್ಟದಲ್ಲಿರುವ ಪತ್ರಿಕೆಗಳಿಗೆ ಕಠಿಣವಾಗಿರುವ ಪ್ರಸಾರ ಸಂಖ್ಯೆಯ ಅವೈಜ್ಞಾನಿಕ ಮಾನದಂಡವನ್ನು ರದ್ದುಪಡಿಸಿ, 2013ರ ನೀತಿಯನ್ನೇ ಮುಂದುವರಿಸಬೇಕು ಮತ್ತು ನೀತಿ ರೂಪಿಸುವ ಸಂದರ್ಭದಲ್ಲಿ ಸಂಪಾದಕರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.
ಪರಿಶಿಷ್ಟ ಜಾತಿ–ಪಂಗಡ ಪತ್ರಿಕೆಗಳಿಗೆ ವಿಧಿಸಿರುವ ಅವೈಜ್ಞಾನಿಕ ನಿಯಮಗಳನ್ನು ಕೈಬಿಡಬೇಕು. ಜೊತೆಗೆ, ಹಲವು ವರ್ಷಗಳಿಂದ ಬಾಕಿಯಿರುವ ಜಾಹೀರಾತು ದರ ಪರಿಷ್ಕರಣೆಯನ್ನು ತಕ್ಷಣ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಕರ್ನಾಟಕ ಜಾಹೀರಾತು ನೀತಿ–2026ರಲ್ಲಿನ ಮಾರಕ ಅಂಶಗಳನ್ನು ಕೈಬಿಟ್ಟು, ಪುನರ್ ಪರಿಶೀಲನೆ ನಡೆಸುವವರೆಗೆ ಅದರ ಅನುಷ್ಠಾನಕ್ಕೆ ತಡೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಜನಾಥ ಹಿರೇಮಠ, ಖಜಾಂಚಿ ರಾಜಕುಮಾರ ನಲ್ಲಿಕರ್, ಸಂಪಾದಕರಾದ ರಾಜೇಶ ಪಾಟೀಲ್, ಪ್ರಕಾಶ ದೊರೆ, ಶಂಕ್ರಪ್ಪ ಅರುಣಿ, ರೋಹಿತ್, ರವೀಂದ್ರನಾಥ, ನಾಗರಾಜ ಕೋಟೆ, ಭೀಮಾಶಂಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.
“ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಜನರ ಧ್ವನಿಯಾಗಿವೆ. ಅವುಗಳನ್ನು ದುರ್ಬಲಗೊಳಿಸುವ ಯಾವುದೇ ನೀತಿ ಸ್ವೀಕಾರಾರ್ಹವಲ್ಲ. ಕರ್ನಾಟಕ ಜಾಹೀರಾತು ನೀತಿ–2026 ಅನ್ನು ತಕ್ಷಣ ವಾಪಸ್ ಪಡೆಯಬೇಕು. ಸಣ್ಣ ಪತ್ರಿಕೆಗಳ ಉಳಿವು ಮತ್ತು ಬೆಳವಣಿಗೆಗಾಗಿ ಸರ್ಕಾರ ಸೂಕ್ತ ತಿದ್ದುಪಡಿ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ”
– ಪ್ರಕಾಶ್ ದೊರೆ, ಸಂಪಾದಕ, ಸೆಕ್ಯುಲರ್ ವಾಯ್ಸ್ ದಿನಪತ್ರಿಕೆ, ಯಾದಗಿರಿ


