CRIME NEWS : “ಯಾದಗಿರಿ| ಕೃಷಿ ಹೊಂಡದಲ್ಲಿ ಈಜಲು ಹೋಗಿ ನಾಲ್ವರು ಕಂದಮ್ಮಗಳ ದಾರುಣ ಸಾವು”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಸುರಪುರ :
ಶಾಲಾ ರಜೆಯ ಸಂಭ್ರಮದಲ್ಲಿ ಆಟವಾಡಲು ಹೋಗಿದ್ದ ನಾಲ್ವರು ಕಂದಮ್ಮಗಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಇಂದು ನಡೆದಿದೆ. ಈ ದುರಂತದಿಂದ ಇಡೀ ಗ್ರಾಮವೇ ಕಣ್ಣೀರಿನಲ್ಲಿ ಮುಳುಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಗ್ರಾಮದ ಮಕ್ಕಳು ಆಟವಾಡುತ್ತಾ ಸಮೀಪದ ಜಮೀನಿನಲ್ಲಿದ್ದ ಕೃಷಿ ಹೊಂಡದ ಬಳಿ ತೆರಳಿದ್ದಾರೆ. ಹೊಂಡದ ಆಳದ ಅರಿವಿಲ್ಲದೆ ನೀರಿಗೆ ಇಳಿದ ಮಕ್ಕಳು ಈಜಲು ಮುಂದಾಗಿದ್ದಾರೆ. ಈ ವೇಳೆ ಒಬ್ಬ ಮಗು ಮುಳುಗುವುದನ್ನು ಕಂಡು ಆತನನ್ನು ರಕ್ಷಿಸಲು ಹೋದ ಉಳಿದ ಮೂವರು ಮಕ್ಕಳು ಕೂಡ ಒಬ್ಬರ ಹಿಂದೆ ಒಬ್ಬರಂತೆ ನೀರಿನ ಆಳಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತಪಟ್ಟ ಮಕ್ಕಳನ್ನು ಕಿರಣ (6), ಶರತ್ (6), ಹಣಮೇಶ (7) ಮತ್ತು ಬಸಮ್ಮ (11) ಎಂದು ಗುರುತಿಸಲಾಗಿದೆ. ಈ ಪೈಕಿ ಕಿರಣ ಮತ್ತು ಶರತ್ ಇಬ್ಬರೂ ರಾಚಪ್ಪ ಕಾಡಾಮಗೇರಿ ಅವರ ಪುತ್ರರಾಗಿದ್ದು, ಒಂದೇ ಮನೆಯ ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವುದು ಕುಟುಂಬದ ದುಃಖವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಸುರಕ್ಷತಾ ಕ್ರಮಗಳಿಲ್ಲದ ಕೃಷಿ ಹೊಂಡಗಳು ಮಕ್ಕಳ ಪಾಲಿಗೆ ಮೃತ್ಯುಕೂಪವಾಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಂಡದ ಸುತ್ತ ರಕ್ಷಣಾ ಬೇಲಿ ಇಲ್ಲದಿರುವುದೇ ಈ ದುರಂತಕ್ಕೆ ಕಾರಣವೆಂದು ಅವರು ಆರೋಪಿಸಿದ್ದಾರೆ. ಕೃಷಿ ಹೊಂಡಗಳ ನಿರ್ಮಾಣದ ವೇಳೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಯಾದಗಿರಿ ಜಿಲ್ಲೆಯ ಅಸಿಸ್ಟೆಂಟ್ ಕಮಿಷನರ್ ಶ್ರೀಧರ, ಸುರಪುರ ಡಿವೈಎಸ್‌ಪಿ ಜಾವೇದ್ ಇನಾಮ್ದಾರ್, ಕೆಂಭಾವಿ ಪೊಲೀಸ್ ಠಾಣೆಯ ಪಿಎಸ್‌ಐ ಹಣಮಂತ್ರಾಯ ಸಿದ್ದಾಪುರ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣವನ್ನು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ದುರಂತದ ನಂತರ ನಗನೂರು ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಪ್ರತಿಯೊಂದು ಮನೆಯಲ್ಲೂ ಶೋಕದ ಛಾಯೆ ಆವರಿಸಿದೆ. ಶಾಲಾ ರಜೆಯ ಮೋಜಿನಲ್ಲಿ ಕಾಲ ಕಳೆಯಬೇಕಿದ್ದ ಮಕ್ಕಳಿಗೆ ಆಟದ ಜಾಗವೇ ಮೃತ್ಯುಕೂಪವಾಗಿ ಪರಿಣಮಿಸಿದ್ದು, ಪೋಷಕರ ಬದುಕಿನಲ್ಲಿ ಅಳಿಸಲಾಗದ ನೋವಿನ ಗುರುತು ಮೂಡಿಸಿದೆ