“ಕೊಪ್ಪಳ| ಗಾವರಾಳ ಜನರ ನಿದ್ದೆಗೆಡಸಿದ ಚಿರತೆ ಕೊನೆಗೆ ಸೆರೆ: ಶಾಶ್ವತ ಕ್ರಮಕ್ಕೆ ಸ್ಥಳೀಯರ ಒತ್ತಾಯ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕುಕನೂರು :
ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಗಾವರಾಳ ಗ್ರಾಮದ ಕಲ್ಲು ಕ್ವಾರಿಯಲ್ಲಿ ವಾಸವಿದ್ದ ಚಿರತೆಯನ್ನು ಶನಿವಾರ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ ತಿಳಿದು ಬಂದಿದೆ.
ಬರೀ ಕಲ್ಲು ಕ್ವಾರಿಗಳಲ್ಲದೇ ತೋಟಗಳಲ್ಲಿ ಹಾಗೂ ಕೃಷಿ ಜಮೀನುಗಳಲ್ಲಿ, ಅಲ್ಲದೆ ಗ್ರಾಮದ ಸಮೀಪದ ಮನೆಗಳಿಗೆ ಸಮೀಪದ ಸಹ ಚಿರತೆ ಕಾಣಿಸುತ್ತಿತ್ತು. ಚಿರತೆ ಕಂಡು ಗ್ರಾಮಸ್ಥರು ಭಯ ಭೀತರಾಗಿದ್ದರು. ಚಿರತೆ ಕಾಟಕ್ಕೆ ಹೆದರಿ ಕೃಷಿ ಕೆಲಸ ಮಾಡದೆ ಕೈ ಬಿಟ್ಟಿದ್ದರು. ಗಾವರಾಳ ಗ್ರಾಮದ ಕಲ್ಲು ಕ್ವಾರಿಗಳು ಕಲ್ಲಿನ ಗುಂಪೆಗಳಲ್ಲಿ ಚಿರತೆ ಮನೆ ಮಾಡಿಕೊಂಡು ವಾಸವಿತ್ತು ಎನ್ನಲಾಗಿದೆ.
ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಬೋನ್ ಸಹ ಅಳವಡಿಸಿದ್ದರು. ಗದಗಿನ ಪ್ರಾಣಿ ಸಂಗ್ರಹಾಲಯದ ಅರಣ್ಯ ಇಲಾಖೆ ಸಿಬ್ಬಂಧಿಗಳ ಸಹಾಯದಿಂದ ಚಿರತೆಗೆ ಮದ್ದು ಬರುವ ಇಂಜಕ್ಷನ್ ನೀಡಿ ಚಿರತೆಯನ್ನು ಬಲೆ ಹಾಕುವ ಮೂಲಕ ಸೆರೆ ಹಿಡಿದಿದ್ದಾರೆ. ಸೆರೆ ಸಿಕ್ಕ ಹೆಣ್ಣು ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಕಲ್ಲು ಕ್ವಾರಿಗಳಲ್ಲಿ ವಾಸ: ಕಳೆದ ನಾಲ್ಕೈದು ವರ್ಷಗಳಿಂದ ಗಾವರಾಳದ ಕಲ್ಲು ಕ್ವಾರಿಗಳಲ್ಲಿ ಚಿರತೆಗಳು ವಾಸವಾಗಿದ್ದಾವೆ. ಈಗಾಗಲೇ ಎರಡೂ ಮೂರು ಚಿರತೆಗಳನ್ನು ಈ ಸ್ಥಳದಲ್ಲಿಯೇ ಸೆರೆ ಹಿಡಿಯಲಾಗಿದೆ. ಚಿರತೆಗಳು ಮರಿಗಳನ್ನು ಹಾಕಿ ಇಲ್ಲಿಯೇ ವಾಸವಾಗಿವೆ. ಗಾವರಾಳ ಗ್ರಾಮಸ್ಥರದಲ್ಲಿ ಚಿರತೆಗಳ ಬಗ್ಗೆ ಭಯ ಹೆಚ್ಚಾಗಿದೆ. ಇದರ ಬಗ್ಗೆ ಅರಣ್ಯ ಇಲಾಖೆ, ಜಿಲ್ಲಾಡಳಿತ ಪರಿಶೀಲಿಸಿ ಶಾಶ್ವತ ಕ್ರಮಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹ.