“ಕುಕನೂರ| ಗುದ್ನೇಶ್ವರ ದೇವಸ್ಥಾನದ ಜಮೀನು ಮುಜರಾಯಿ ಇಲಾಖೆಗೆ ಸೇರಿದೆ.!- ನನ್ನ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ : ಶಾಸಕ ಬಸವರಾಜ ರಾಯರೆಡ್ಡಿ ಸ್ಪಷ್ಟನೆ
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕುಕನೂರು :
ಪಟ್ಟಣದ ರುದ್ರಮುನೇಶ್ವರ (ಗುದ್ನೇಶ್ವರ) ಮಠದ ಜಮೀನು ವಿಚಾರ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ನಡುವೆಯೇ ಕೆಲವರು ವಿಷಯವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಖಂಡಿಸಿ, ಯಲಬುರ್ಗಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಬುಧವಾರ ಕುಕನೂರಿನಲ್ಲಿ ಸ್ಪಷ್ಟನೆ ನೀಡಿದರು.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಗುದ್ನೇಶ್ವರ ಮಠದ ಜಮೀನು ಈಗಾಗಲೇ ಮುಜರಾಯಿ ಇಲಾಖೆಗೆ ಸೇರಿದೆ. ಸೇವಾದಾರರು, ಅರ್ಚಕರು ಅಥವಾ ಖಾಸಗಿ ವ್ಯಕ್ತಿಗಳಿಗೆ ನೀಡಲು ಸಾಧ್ಯವಿಲ್ಲ. ಇದು ಸರ್ಕಾರದ ಸ್ವಾಧೀನದ ಭೂಮಿ. ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಮತ್ತು ಸರ್ಕಾರಿ ಭೂಮಿಯೇ ಎಂಬ ತೀರ್ಪು ಬರುವ ವಿಶ್ವಾಸ ನನಗಿದೆ,” ಎಂದು ವಿರೋಧಿ ಪಾಳಯಕ್ಕೆ ಖಡಕ್ ಎಚ್ಚರಿಕೆ ನೀಡಿದರು.
ಅವರು ಮುಂದುವರೆದು, “ಈ ಜಮೀನು ವಿಚಾರದಲ್ಲಿ ನನ್ನ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ತಾಲೂಕು ಮಟ್ಟದಲ್ಲಿ ಸರ್ಕಾರಿ ಕಚೇರಿಗಳಿಗೆ ಸ್ಥಳಾವಕಾಶ ಒದಗಿಸುವ ಉದ್ದೇಶದಿಂದ ಈ ಜಮೀನಿನ ಬಗ್ಗೆ ಮಾಹಿತಿ ನೀಡಿದ್ದೇನೆ. ಹೈಕೋರ್ಟ್ ತೀರ್ಪು ಅಂತಿಮವಲ್ಲ, ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ವರೆಗೂ ಹೋಗುತ್ತೇನೆ,” ಎಂದು ಹೇಳಿದರು.
ತಮ್ಮ ವಿರುದ್ಧ ನಡೆಯುತ್ತಿರುವ ಅಪ ಪ್ರಚಾರವನ್ನು ಖಂಡಿಸಿದ ಅವರು, “ನಾನು ಶಾಸಕನಾಗಿದ್ದು, ಎಲ್ಲರ ಹಿತ ಕಾಪಾಡುವುದು ನನ್ನ ಕರ್ತವ್ಯ. ದೇವಸ್ಥಾನದ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವ ಪ್ರಶ್ನೆಯೇ ಇಲ್ಲ. ಕಟ್ಟಡಗಳು ಬೇಡ ಎಂದರೆ, ನಿಮ್ಮ ಮುಂದಾಳತ್ವದಲ್ಲಿ ಖಾಸಗಿ ಭೂಮಿಯನ್ನು ಸರ್ಕಾರಕ್ಕೆ ಖರೀದಿ ಮಾಡಿಕೊಡಿ,” ಎಂದು ಹೇಳಿದರು.