LOCAL NEWS: “ಕೊಪ್ಪಳ|ಬೂದುಗುಂಪಾ  ವಿದ್ಯಾರ್ಥಿಗಳ  ಸ್ವಯಂ ಪ್ರೇರಿತ ಹೋರಾಟಕ್ಕೆ ಎಐಡಿಎಸ್ಓ ಬೆಂಬಲ : ಬಸ್ ನಿಲುಗಡೆ, ತಂಗುದಾಣ ನಿರ್ಮಾಣಕ್ಕೆ ಆಗ್ರಹ”

By admin

“ಕೊಪ್ಪಳ|ಬೂದುಗುಂಪಾ  ವಿದ್ಯಾರ್ಥಿಗಳ  ಸ್ವಯಂ ಪ್ರೇರಿತ ಹೋರಾಟಕ್ಕೆ ಎಐಡಿಎಸ್ಓ ಬೆಂಬಲ :
ಬಸ್ ನಿಲುಗಡೆ, ತಂಗುದಾಣ ನಿರ್ಮಾಣಕ್ಕೆ ಆಗ್ರಹ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ :

ತಾಲ್ಲೂಕಿನ ಬೂದುಗುಂಪಾ  ಗ್ರಾಮದಲ್ಲಿ ಬಸ್ ನಿಲುಗಡೆ ಮತ್ತು ಬಸ್ ತಂಗುದಾಣ ನಿರ್ಮಾಣಕ್ಕಾಗಿ ಸ್ಥಳೀಯ ವಿದ್ಯಾರ್ಥಿಗಳು ರಸ್ತೆ ತಡೆದು ದಿಢೀರನ್ನೇ ಬುಧುವಾರ ಹೋರಾಟ ನಡೆಸಿ ಕೊಪ್ಪಳ ಸಾರಿಗೆ ಇಲಾಖೆಗೆ ಬಿಸಿ ಮುಟ್ಟಿಸಿದರು.

ಗ್ರಾಮದ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆ-ಕಾಲೇಜುಗಳಿಗೆ ತೆರಳಲು ಬಸ್ಸಿನ ಸೌಲಭ್ಯ ಬಳಸುತ್ತಿದ್ದಾರೆ. ಆದರೆ ಬೂದುಗುಂಪ ಗ್ರಾಮದಲ್ಲಿ ಬಸ್ ನಿಲುಗಡೆಗೆ ಸೂಕ್ತ ಸ್ಥಳ ಹಾಗೂ ತಂಗುದಾಣದ ವ್ಯವಸ್ಥೆ ಇಲ್ಲದ ಕಾರಣ ಯಾವುದೇ ಬಸ್ ನಿಲ್ಲದ ಪರಿಸ್ಥಿತಿ ಎದುರಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಯಾಣದ ತೊಂದರೆ ಉಂಟಾಗಿದೆ.

ಇತ್ತೀಚೆಗಷ್ಟೇ ಬಸ್ಸಿನಿಂದ ವಿದ್ಯಾರ್ಥಿಯೊಬ್ಬರು ಕೆಳಗೆ ಬಿದ್ದರೂ ಕೂಡ ಬಸ್  ಚಾಲಕ ಬಸ್ ನಿಲ್ಲಿಸದೆ ಸಾಗಿದ ಘಟನೆ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಬೇಸರಗೊಂಡ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಸ್ತೆ ತಡೆದು ಹೋರಾಟ ನಡೆಸಿದರು.

ಈ ಹೋರಾಟಕ್ಕೆ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗ್ನೈಸೇಷನ್‌ ( ಎ.ಐ.ಡಿ.ಎಸ್.ಓ) ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ತುಳಜಾ ರಾಮ್ ಎನ್‌ .ಕೆ.  ಹಾಗೂ ಸಿಂಧು ಕೌದಿ ಅವರು ಬೆಂಬಲ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಆಗ್ರಹಿಸಿ ಮಾತನಾಡಿದರು. 

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೂದುಗುಂಪದಲ್ಲಿ ಎರಡು ಕಡೆ ಬಸ್ ತಂಗುದಾಣ ನಿರ್ಮಾಣ ಮಾಡಬೇಕು ಹಾಗೂ ಇಚಲಕರಂಜಿ, ಹುಬ್ಬಳ್ಳಿ, ಕಾರವಾರ, ಸಿಂಧನೂರು, ರಾಯಚೂರು ಮಾರ್ಗದ ಬಸ್ಸುಗಳು ನಿಲುಗಡೆ ಮಾಡಬೇಕೆಂದು ಅವರು ಸಾರಿಗೆ ಮೇಲ್ವಿಚಾರಕ ಮಂಜುನಾಥ್ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. 

ಸುಮಾರು ಮೂರು ಗಂಟೆಗಳ ಕಾಲ ರಸ್ತೆ ತಡೆದು ನಡೆದ ಈ ಪ್ರತಿಭಟನೆಯಲ್ಲಿ ಭಾಗ್ಯಶ್ರೀ, ಮಂಜವ್ವ, ಕವಿತಾ, ಕೀರ್ತನ, ಪವಿತ್ರ, ಹನುಮಂತಿ, ಶಶಿಕಲಾ, ಅಕ್ಷತಾ, ಕರಿಯಮ್ಮ, ನಫೀಜ, ಕರಿಯಣ್ಣ, ಮಲ್ಲಿಕಾರ್ಜುನ, ದೀಪಿಕಾ, ಬಸಮ್ಮ, ರೇಣುಕಾ, ಭೀಮಶ್ರೀ, ಸೌಂದರ್ಯ, ಲಕ್ಷ್ಮಿ ಸೇರಿದಂತೆ ಅನೇಕ ಕಾಲೇಜು ವಿದ್ಯಾರ್ಥಿಗಳು ಹಾಗೂ ರೈತ ಸಂಘದ ಹನುಮಂತಪ್ಪ, ಫಕೀರಪ್ಪ ಸೇರಿದಂತೆ ಹಲವರು  ಭಾಗವಹಿಸಿದ್ದರು.