LOCAL NEWS :”ಕೊಪ್ಪಳ| ಸ್ವಯಂ ಚಿಂತನೆ–ಅರಿವು ಬೆಳೆಸಿಕೊಂಡು ಜವಾಬ್ದಾರಿಯುತ  ವ್ಯಕ್ತಿಗಳಾಗಬೇಕು : ಡಾ. ಹುಲಿಗೆಮ್ಮ ಅಭಿಮತ”

By admin

“ಕೊಪ್ಪಳ| ಸ್ವಯಂ ಚಿಂತನೆ–ಅರಿವು ಬೆಳೆಸಿಕೊಂಡು ಜವಾಬ್ದಾರಿಯುತ  ವ್ಯಕ್ತಿಗಳಾಗಬೇಕು : ಡಾ. ಹುಲಿಗೆಮ್ಮ ಅಭಿಮತ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:  

ವಿದ್ಯಾರ್ಥಿನಿಯರು ಸ್ವಯಂ ಆಲೋಚನೆ ಹಾಗೂ ಅರಿವು ಬೆಳಸಿಕೊಂಡು ಜೀವನದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳಾಗಬೇಕು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಭಾರ ಪ್ರಾಚಾರ್ಯೆ ಡಾ. ಹುಲಿಗೆಮ್ಮ ಹೇಳಿದರು.

ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪ್ರಥಮ ವರ್ಷದ ರೆಂಜರ್ಸ್ (ಸ್ಕೌಟ್ ಮತ್ತು ಗೈಡ್) ವಿದ್ಯಾರ್ಥಿನಿಯರ ಅಭಿಯೋಜನೆ ಹಾಗೂ ಸ್ವಾಗತ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಶಿಕ್ಷಕರಿಗಿಂತ ವಿದ್ಯಾರ್ಥಿಗಳೇ ಹೆಚ್ಚು ಕ್ರಿಯಾಶೀಲರಾಗಬೇಕು. ನೆಪ ಹೇಳುತ್ತ ಕಾಲ ಕಳೆಯುವ ಅಭ್ಯಾಸ ಬಿಟ್ಟು ಶಿಸ್ತು, ಸಮಯ ಪ್ರಜ್ಞೆ, ಅರಿವು ಇವುಗಳನ್ನು ಸದೃಢವಾಗಿಸಿಕೊಳ್ಳಬೇಕು. ಮಹಿಳೆಯರ ಮೇಲೆ ಸಮಾಜದ ಬಹುಮುಖ್ಯ ಜವಾಬ್ದಾರಿ ಇದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಲಕ್ಷ್ಮೀ, ದುರಗಮ್ಮ, ಕಮಲ, ಪವಿತ್ರ ಪವರ್ ಹಾಗೂ ವೈಷ್ಣವಿ ಸ್ಕೌಟ್–ಗೈಡ್‌ಗಳ ಇತಿಹಾಸ, ನಿಯಮಗಳು, ಮಾರ್ಗದರ್ಶನಗಳು ಮತ್ತು ಉದ್ದೇಶಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ದೈಹಿಕ ಶಿಕ್ಷಣ ಬೋಧಕರಾದ ಡಾ. ಪ್ರದೀಪ್ ಕುಮಾರ್ ಮಾತನಾಡಿ, “ಶಿಸ್ತು, ದೇಶಭಕ್ತಿ, ಹಿರಿಯರ ಬಗ್ಗೆ ಗೌರವ ಮತ್ತು ಸೇವಾಭಾವನೆ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದ ಮೌಲ್ಯಗಳು. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಸ್ಕೌಟ್–ಗೈಡ್ ವಿದ್ಯಾರ್ಥಿಗಳು ದೇಶದ ಪ್ರಗತಿಯಲ್ಲಿ ಪಾತ್ರವಹಿಸಬೇಕು” ಎಂದು ಸಲಹೆ ನೀಡಿದರು.

ವಾಣಿಜ್ಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಹಾಗೂ ರೆಂಜರ್ಸ್ ಘಟಕದ ನಿಕಟ ಪೂರ್ವ ಸಂಚಾಲಕಿ ಸುಮಿತ್ರಾ ಎಸ್.ವಿ ಅವರು, ಕಾಲೇಜಿನ ಸ್ಕೌಟ್–ಗೈಡ್ ವಿದ್ಯಾರ್ಥಿನಿಯರು ರಾಜ್ಯ ಪುರಸ್ಕಾರ ಪಡೆದಿರುವುದನ್ನು ಶ್ಲಾಘಿಸಿ, “ಸಮರ್ಪಣೆ ಮನೋಭಾವನೆ ಬೆಳೆಸಿ, ಯಾವಾಗಲೂ ಸೇವೆಗೆ ಸಿದ್ಧರಾಗಿರಿ. ನೀವು ಕೂಡ ದೇಶದ ಗಡಿ ಕಾಯುವ ಸೈನಿಕರಂತೆ ಮನಸ್ಸಿನ ದೃಢತೆ ಹೊಂದಿರಬೇಕು” ಎಂದು ಹೇಳಿದರು.

ಸ್ಕೌಟ್–ಗೈಡ್ ಘಟಕದ ಸಂಚಾಲಕಿ ಶುಭ ಟಿ.ಎಂ ಅವರು, ಪಠ್ಯತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳ ವ್ಯಕ್ತಿತ್ವ ಮತ್ತು ಜ್ಞಾನ ವಿಕಾಸಕ್ಕೆ ಮಹತ್ವದ್ದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನರಸಿಂಹ ಗುಂಜಳ್ಳಿ ,  ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಮಯ್ಯ ಕೆ. ಉಪಸ್ಥಿತರಿದ್ದರು. ವೈಷ್ಣವಿ ಸ್ವಾಗತಿಸಿ, ಭವ್ಯ ನಿರೂಪಿಸಿ, ಶಕುಂತಲಾ ವಂದಿಸಿದರು.