🔴 CRIME NEWS : “ಕೊಪ್ಪಳ|ಅಂತರ್ಜಾತಿ ವಿವಾಹ ಹಿನ್ನೆಲೆ : ಗರ್ಭಿಣಿ ತಂಗಿ ಮೇಲೆ ಅಣ್ಣ ನಿಂದ ಕೊಡಲಿಯಿಂದ ಹಲ್ಲೆ, ಕೊಲೆಗೆ ಯತ್ನ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ:
ನಾಲ್ಕು ತಿಂಗಳ ಗರ್ಭಿಣಿಯಾಗಿರುವ ತಂಗಿಯನ್ನೇ ವ್ಯಕ್ತಿಯೋರ್ವ ಕೊಡಲಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಘಟನೆ ತಾಲೂಕಿನ ಹಂದ್ರಾಳ್ ಗ್ರಾಮದಲ್ಲಿ ಬುಧವಾರ ನಡೆದಿದೆ.
ಬೇರೆ ಜಾತಿಯ ಯುವಕನ್ನು ಮದುವೆ ಆಗಿದಕ್ಕೆ ಸ್ವಂತ ತಂಗಿಯನ್ನೇ ಕೊಡಲಿಯಿಂದ ಸಹೋದರ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಚಿತ್ತಾಪುರದ ಮೀನಾಕ್ಷಿ ಗಂಭೀರವಾಗಿ ಗಾಯಗೊಂಡ ಮಹಿಳೆ. ಮಂಜುನಾಥ ಎಂಬಾತ ಹಲ್ಲೆ ನಡೆಸಿದ ಆರೋಪಿ ಎಂದು ತಿಳಿದು ಬಂದಿದೆ.
ಒಂದು ವರ್ಷದ ಹಿಂದೆ ಕುರುಬ ಜನಾಂಗಕ್ಕೆ ಸೇರಿದ ಯುವತಿ ಮೀನಾಕ್ಷಿ ಮತ್ತು ನಾಯಕ ಸಮುದಾಯಕ್ಕೆ ಸೇರಿದ ಯುವಕನ ಜೊತೆ ಮದುವೆ ಆಗಿದ್ದರು. ಒಂದು ವರ್ಷದಿಂದ ಬೇರೆ ಊರಲ್ಲಿ ವಾಸವಿದ್ದ ಇವರು, ಸಂಬಂಧಿಯ ಮದುವೆ ಇದ್ದ ಕಾರಣ ಊರಿಗೆ ಬಂದಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಆರೋಪಿ ಮಂಜುನಾಥ ಮನೆಯಲ್ಲಿ ಇದ್ದ ಮೀನಾಕ್ಷಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ.
ಗಾಬರಿಗೊಂಡ ಯುವತಿ ಮದುವೆ ವೇದಿಕೆಯತ್ತ ಓಡಿ ಬಂದಿದ್ದು, ಈ ವೇಳೆ ವೇದಿಕೆಯ ಮುಂದೆಯೇ ಕೊಡಲಿಯಿಂದ ತಲೆಗೆ, ಬೆನ್ನು ಮತ್ತು ಎಡಗೈಗೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ತೀವ್ರವಾಗಿ ಗಾಯಗೊಂಡ ಯುವತಿಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸದ್ಯ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಆಸ್ಪತ್ರೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ ಅವರು ಭೇಟಿ ನೀಡಿ ವಿಚಾರಿಸಿದ್ದಾರೆ.