🔵 LOCAL EXPRESS : “ಕನಕಗಿರಿ|ಕರ್ನಾಟಕ ದರ್ಶನ ಪ್ರವಾಸಕ್ಕೆ ನಿರ್ಲಕ್ಷ ಆರೋಪ: ಉಪಪ್ರಾಂಶುಪಾಲ ಅಮಾನತ್ತಿಗೆ  ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ”

By admin

  LOCAL EXPRESS : “ಕನಕಗಿರಿ|ಕರ್ನಾಟಕ ದರ್ಶನ ಪ್ರವಾಸಕ್ಕೆ ನಿರ್ಲಕ್ಷ ಆರೋಪ: ಉಪಪ್ರಾಂಶುಪಾಲ ಅಮಾನತ್ತಿಗೆ  ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕನಕಗಿರಿ:

“ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡ ಮಕ್ಕಳಿಗಾಗಿ ಪ್ರವಾಸೋದ್ಯಮ ಇಲಾಖೆಯ ಆಶಾದಾಯಕ ಯೋಜನೆಯಾದ “ಕರ್ನಾಟಕ ದರ್ಶನ” ಪ್ರವಾಸ ಹಮ್ಮಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲೂಕ ಸಂಚಾಲಕ ನೀಲಕಂಠ ಬಡಿಗೇರ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಹಾಗೂ ಕ್ರೈಸ್ ಶಾಲೆಗಳ ಪ.ಜಾ ಮತ್ತು ಪ.ಪಂ ಮಕ್ಕಳಿಗೆ ಉಚಿತ ಪ್ರವಾಸ ನೀಡುವ ಉದ್ದೇಶದ ಯೋಜನೆಯಿಂದ ಕೆಲವು ಶಾಲೆಗಳು ಮಕ್ಕಳನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ದೂರಿದರು.

ಅಖಂಡ ಗಂಗಾವತಿ ತಾಲೂಕದ ಕನಕಗಿರಿ, ಕಾರಟಗಿ ಪ್ರದೇಶಗಳ ಸರ್ಕಾರಿ ಶಾಲೆಗಳು, ಕ್ರೈಸ್ ಶಾಲೆ, ಕೆಆರ್‌ಎಸ್ ಶಾಲೆ, ಇಂದಿರಾಗಾಂಧಿ ವಸತಿ ಶಾಲೆಗಳು ಸೇರಿ ಒಟ್ಟು 12 ಶಾಲೆಗಳ 176 ಮಕ್ಕಳು (ಪ.ಜಾ–98, ಪ.ಪಂ–78) ಯೋಜನೆಯ ಸದುಪಯೋಗ ಪಡೆಯಬೇಕಾಗಿದ್ದರೂ, ಕೇವಲ 136 ಮಕ್ಕಳು ಮಾತ್ರ ಪ್ರವಾಸದಲ್ಲಿ ಭಾಗವಹಿಸಿರುವುದು ದುರಂತ ಎಂದು ಹೇಳಿದರು.

ಪ್ರಮುಖವಾಗಿ ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ಜಗದೀಶ ಹಾದಿಮನಿ ಅವರು ಉದ್ದೇಶಪೂರ್ವಕವಾಗಿ ಒಂದು ಮಗುವನ್ನೂ ಪ್ರವಾಸಕ್ಕೆ ಕಳಿಸದೆ ಬಡ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಮೇಲಾಧಿಕಾರಿಗಳ ಸಭೆಗಳಿಗೆ ಹಾಜರಾಗದೆ ಆದೇಶ ಪಾಲನೆ ಮಾಡಿಲ್ಲವೆಂದೂ ದೂರಿದರು.
ಈ ವಿಷಯ ಸಂಘಟನೆಗಳು ಹಾಗೂ ಮಾಧ್ಯಮಗಳ ಗಮನಕ್ಕೆ ಬಂದ ಬಳಿಕ, ಪ್ರವಾಸಕ್ಕೆ ಆಯ್ಕೆಯಾಗಬೇಕಿದ್ದ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ, ವಿವಿಧ ಸಬೂಬುಗಳನ್ನು ಹೇಳಿಸಿ ಮಕ್ಕಳ ಮೂಲಕ ಪತ್ರಗಳನ್ನು ಬರೆಯಿಸಿಕೊಂಡು ವಿಷಯ ಮುಚ್ಚಿಹಾಕಲು ಯತ್ನ ನಡೆದಿದೆ ಎಂದು ಆರೋಪಿಸಿದರು.

ಈ ಹಿಂದೆ ಎಲ್‌ಕೆಜಿ ಮತ್ತು ಯುಕೆಜಿ ದಾಖಲಾತಿ ವಿಚಾರದಲ್ಲಿಯೂ ವಿದ್ಯಾರ್ಥಿ ವಿರೋಧಿ ಕೃತ್ಯಗಳ ಬಗ್ಗೆ ಗಂಭೀರ ಆರೋಪಗಳಿದ್ದು, ಇಂತಹ ನಡೆ ಮುಂದುವರಿದರೆ ಮಕ್ಕಳ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರು.

ಆದ್ದರಿಂದ, ಉಪಪ್ರಾಂಶುಪಾಲ ಜಗದೀಶ ಹಾದಿಮನಿ ಅವರನ್ನು ತಕ್ಷಣವೇ ಅಮಾನತ್ತು ಮಾಡಬೇಕು. ಬೇಡಿಕೆಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಪಾಮಣ್ಣ ಅರಳಿಗನೂರು, ಸಣ್ಣ ಹನುಮಂತಪ್ಪ ಹುಲಿಹೈದರ್, ವಿರೇಶ ವಕೀಲರು, ಕೃಷ್ಣಮೂರ್ತಿ ಸಂಗಾಪುರ, ರಮೇಶ ಡಣಾಪುರ, ಚಿದಾನಂದಪ್ಪ ಡಣಾಪುರ, ಬಸವರಾಜ ಮಲ್ಲಾಪುರ, ಶರಣಪ್ಪ ಸಿದ್ದಾಪುರ, ದೇವರಾಜ ವಕೀಲರು, ಸುರೇಶ ಮಾನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.