LOCAL EXPRESS: “ಯಾದಗಿರಿ| ಆರ್‌ಎಸ್‌ಎಸ್ ವಿರುದ್ಧ: ಪ್ರಿಯಾಂಕ್ ಖರ್ಗೆ ಬೆಂಬಲಿಸಿ ಇದೇ ನ.25ರಂದು ಡಿಎಸ್‌ಎಸ್‌ ವತಿಯಿಂದ ಬೃಹತ್ ಪ್ರತಿಭಟನೆ”

By admin

“ಯಾದಗಿರಿ| ಆರ್‌ಎಸ್‌ಎಸ್ ವಿರುದ್ಧ: ಪ್ರಿಯಾಂಕ್ ಖರ್ಗೆ ಬೆಂಬಲಿಸಿ ಇದೇ ನ.25ರಂದು ಡಿಎಸ್‌ಎಸ್‌ ವತಿಯಿಂದ ಬೃಹತ್ ಪ್ರತಿಭಟನೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಯಾದಗಿರಿ:

ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಆರೋಪದ ಆರ್‌ಎಸ್‌ಎಸ್ ವಿರುದ್ಧ, ಹಾಗೂ “ರಾಷ್ಟ್ರಗೀತೆಯನ್ನು ಬ್ರಿಟಿಷ್ ಅಧಿಕಾರಿಗೆ ಸ್ವಾಗತಿಸಲು ಬರೆಯಲಾಗಿದೆ” ಎಂಬ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಇದೇ  ನ. 25ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ  ಅವರು ತಿಳಿಸಿದ್ದಾರೆ.

 ಗುರುವಾರ  ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದೇ ದಿನ ಪ್ರತಿಭಟನೆ ಜರುಗಲಿದ್ದು, ಯಾದಗಿರಿಯಲ್ಲೂ ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಸಂವಿಧಾನ ಪ್ರತಿಗಳು, ಬಾಬಾಸಾಹೇಬ ಅಂಬೇಡ್ಕರ್ ಭಾವಚಿತ್ರಗಳು, ನೀಲಿ ಧ್ವಜಗಳು ಹಾಗೂ ತಮಟೆಗಳೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು. ನಂತರ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು ಎಂದರು.

ಅಧಿಕೃತ ನೋಂದಣಿ ಇಲ್ಲದಿದ್ದರೂ ಶತಮಾನೋತ್ಸವ ಆಚರಣೆ ಮಾಡುತ್ತಿರುವ ಆರ್‌ಎಸ್‌ಎಸ್, ಮನುವಾದಿ ಚಿಂತನೆ ಹರಡಿ, ಬಿಜೆಪಿಯ ಮುಖವಾಣಿ ಸಂಸ್ಥೆಯಂತೆ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದರು. ಆರ್‌ಎಸ್‌ಎಸ್ ಕುರಿತು ಪ್ರಶ್ನೆ ಎತ್ತಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆಗಳು ಹೊರಬೀಳುತ್ತಿರುವುದು ನಾಚಿಕೆಗೆಡು ಎಂದರು.

ನಂತರ ಮಾತನಾಡಿದ ಶಿವಲಿಂಗ ಹಸನಾಪುರ, “ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ದುರ್ಬಲಗೊಳಿಸುವ ಶಕ್ತಿಗಳು ಸಕ್ರಿಯವಾಗಿವೆ. ಸಿಜೆಐ ಬಿ.ಆರ್. ಗವಾಯಿ ಹಾಗೂ ಅಂಬೇಡ್ಕರ್ ವಿರುದ್ಧ ನಡೆಯುತ್ತಿರುವ ಅವಹೇಳನ ಪ್ರಜಾಪ್ರಭುತ್ವಕ್ಕೆ ಅಪಾಯದ ಸೂಚನೆ” ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆ ಅವರು ಸಂವಿಧಾನದ ಚೌಕಟ್ಟಿನಲ್ಲಿ ನಡೆದುಕೊಳ್ಳುವಂತೆ ಸೂಚಿಸಿದ್ದಾರೆ ಅಷ್ಟೇ ಹೊರತು ಬೇರೆ ಏನೂ ಮಾಡಿಲ್ಲ. ಆದರೆ ಕೆಲ ದುಷ್ಪ್ರವೃತ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಪದಗಳಿಂದ ನಿಂದನೆ, ಜೀವ ಬೆದರಿಕೆ ನೀಡುತ್ತಿರುವುದು ಖಂಡನೀಯ. ದಲಿತ ನಾಯಕರ ಮೇಲೆ ನಡೆಯುತ್ತಿರುವ ದಾಳಿಯನ್ನು ಎದುರಿಸಲು ಸಂಘಟಿತ ಹೋರಾಟ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಅಂಬೇಡ್ಕರ್ ತತ್ವ ನಂಬಿದ ಪ್ರತಿಯೊಬ್ಬರೂ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಚಂದಪ್ಪ ಮುನೆಪ್ಪನೋರ, ಮರೆಪ್ಪ ಕ್ರಾಂತಿ, ಭೀಮಣ್ಣ ಹುಣಸಗಿ, ತಿಪ್ಪಣ್ಣ ಶೆಳ್ಳಗಿ, ಶರಭಣ್ಣ ದೊರನಳ್ಳಿ, ತಾಯಪ್ಪ ಭಂಡಾರಿ, ಭೀಮಾಶಂಕರ ಗುಂಡಳ್ಳಿ, ರಂಗಸ್ವಾಮಿ ಕೊಂಕಲ್, ದೊಡ್ಡಪ್ಪ ಕಾಡಂಗೇರಾ, ರಮೇಶ್ ಭಾಚಿಮಟ್ಟಿ, ಚಂದ್ರು ಬಲಶೆಟ್ಟಿಹಾಳ, ಎಂ. ಪಟೇಲ್, ಬಲಭೀಮ ಬೇವಿನಹಳ್ಳಿ, ಚನ್ನಪ್ಪ ದೇವಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.