“ಯಲಬುರ್ಗಾ | ಗ್ರಾಮಗಳಿಗೆ ಹೆಚ್ಚುವರಿ ಬಸ್ ಸೇವೆ: ಸಮಯ ಪಾಲನೆಗೆ ಆಗ್ರಹಿಸಿ ಎಸ್.ಎಫ್.ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಯಲಬುರ್ಗಾ:
ತಾಲ್ಲೂಕಿನ ಹಲವಾರು ಹಳ್ಳಿಗಳಿಂದ ವಿದ್ಯಾರ್ಥಿಗಳಿಗೆ ಶಾಲಾ–ಕಾಲೇಜುಗಳಿಗೆ ಸಂಚಾರದಲ್ಲಿ ತೊಂದರೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಸರಿಯಾದ ಸಮಯಕ್ಕೆ ಬಸ್‌ಗಳನ್ನು ಸಂಚರಿಸುವಂತೆ ಹಾಗೂ ಹೆಚ್ಚುವರಿ ಬಸ್‌ಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು. ಬಳಿಕ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ನೀಡಲಾಯಿತು.
ಎಸ್.ಎಫ್.ಐ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಈಚನಾಳ ಮಾತನಾಡಿ, ಯಲಬುರ್ಗಾ ತಾಲೂಕಿನ ಗ್ರಾಮೀಣ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯ ವಿದ್ಯಾಭ್ಯಾಸಕ್ಕಾಗಿ ಯಲಬುರ್ಗಾ ನಗರಕ್ಕೆ ಬರುತ್ತಾರೆ. ಆದರೆ ಬಸ್‌ಗಳು ಶಾಲಾ–ಕಾಲೇಜು ವೇಳೆಗೆ ಸರಿಯಾಗಿ ತಲುಪದಿರುವುದರಿಂದ ಅನೇಕ ವಿದ್ಯಾರ್ಥಿಗಳು ಪಾಠಗಳಿಗೆ ಹಾಜರಾಗಲು ಸಾಧ್ಯವಾಗದೆ, ಶಿಕ್ಷಣದಿಂದ ವಂಚಿತರಾಗುತ್ತಿರುವುದು ಗಂಭೀರ ಸಂಗತಿ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳತ್ತ ಶಾಸಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಗಮನ ಹರಿಸದೆ ಇರುವುದರಿಂದ ಹೋರಾಟದ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಖಂಡಿಸಿದರು. “ಯಾವುದೇ ವಿಳಂಬವಿಲ್ಲದೆ ಗ್ರಾಮಗಳತ್ತ ವೇಳಾಪಟ್ಟಿಗೆ ಅನುಗುಣವಾಗಿ ಬಸ್‌ಗಳನ್ನು ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಸ್ತೆತಡೆ ಸೇರಿದಂತೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ” ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ ಮುಖಂಡರಾದ ರಾಮೂರ್ತಿ, ಯಮನೂರ ಮುಜವರ ಅವರು ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿ, ವಿದ್ಯಾರ್ಥಿಗಳ ಸಂಚಾರ ತೊಂದರೆಯನ್ನು ಶೀಘ್ರ ಪರಿಹರಿಸಲು ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಬೇಡಿಕೆ ಇಟ್ಟು ಹೇಳಿದರು.
ಪ್ರತಿಭಟನೆಯಲ್ಲಿ ಎಸ್.ಎಫ್.ಐ ಜಿಲ್ಲಾ ಉಪಾಧ್ಯಕ್ಷ ಶರೀಫ್ ಎಂ. ಪಿ., ಮುಖಂಡರಾದ ರಾಮೂರ್ತಿ, ಯಮನೂರ ಮುಜವರ, ವಿದ್ಯಾರ್ಥಿಗಳಾದ ಕಿಟ್ಟಪ್ಪ, ಬಸವರಾಜ್, ಅನು ಆಗೋಲಿ, ಅಶ್ವಿನಿ, ಅಮೃತ, ರಾಮು ಪಟೇಲ್, ನವೀನ್ ಸೇರಿದಂತೆ ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.