🚨VIRAL NEWS :”ಹಾಸನ | ಹಾಲು ಕೊಡುತ್ತಿದ ಹಸು ಮಾರಾಟ ಮಾಡಿ RTI ದಾಖಲೆ ಪಡೆದ ರೈತ : 16 ಸಾವಿರ ಪುಟಗಳನ್ನು ಎತ್ತಿನಗಾಡಿಯಲ್ಲಿ ತೆಗೆದುಕೊಂಡು ಹೋದ ಅಪರೂಪದ ಘಟನೆ”
• ಸೆಕ್ಯುಲರ್ ವಾಯ್ಸ ಡೆಸ್ಕ್ ನ್ಯೂಸ್ ;
ಗ್ರಾಮ ಪಂಚಾಯಿತಿ ಕಾರ್ಯಗಳಲ್ಲಿ ಅವ್ಯವಹಾರದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದಾಖಲೆ ಪಡೆಯಲು ರೈತನೊಬ್ಬ ತನ್ನ ಹಸುವನ್ನೇ ಮಾರಾಟ ಮಾಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ಅಚ್ಚರಿ ಮೂಡಿಸಿದೆ. “ಆರ್ ಟಿ ಐ ಮೂಲಕ ಸತ್ಯ ಹೊರಬರಬೇಕು” ಎಂಬ ದೃಢಸಂಕಲ್ಪದಿಂದ ಬಸವನಹಳ್ಳಿ ಕೊಪ್ಪಲು ಗ್ರಾಮದ ಬಿ.ಎಸ್. ರವಿ ಹಸು ಮಾರಾಟ ಮಾಡಿ ದಾಖಲೆ ಪಡೆಯಲು ಮುಂದಾಗಿದ್ದಾರೆ.
ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಕಾಳೇನಹಳ್ಳಿ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಗಳ ವಿವರಗಳನ್ನು ಕೇಳಲು ರವಿ RTI ಅರ್ಜಿ ಸಲ್ಲಿಸಿದ್ದರು. ಆದರೆ ನೀಡಬೇಕಾದ ದಾಖಲೆಗಳ ಪ್ರಮಾಣವೇ ಎಲ್ಲರನ್ನು ಬೆರಗುಗೊಳಿಸಿತು—ಒಟ್ಟು 16,000 ಪುಟಗಳು! ನಿಯಮಾನುಸಾರ ಪ್ರತಿಪುಟಕ್ಕೆ ₹2 ಶುಲ್ಕ, ಒಟ್ಟಾರೆ ₹32,000 ಪಾವತಿಸಬೇಕಾಯಿತು. ಸಾಮಾನ್ಯ ರೈತನಿಗೆ ಇದು ದೊಡ್ಡ ಮೊತ್ತವಾದರೂ, “ದಾಖಲೆ ಬೇಕು” ಎಂಬ ಬದಲಾಗದ ರವಿ, ತನ್ನ ಹಾಲು ಕೊಡುತ್ತಿದ್ದ ಹಸುವನ್ನೇ ₹32,000ಕ್ಕೆ ಮಾರಾಟ ಮಾಡಿ, ಆ ಹಣವನ್ನು ಸಂಪೂರ್ಣವಾಗಿ RTI ಶುಲ್ಕಕ್ಕೆ ಪಾವತಿಸಿದರು.
ಅಧಿಕಾರಿಗಳ ಒತ್ತಡ, ವಿಳಂಬ, ಹಾಗೂ ಕೆಲವು ಗ್ರಾಮಸ್ಥರ ಅಡ್ಡಿಪಡಿಸಿದ್ದರೂ, ರವಿ ಹಿಂದೆ ಸರಿಯದೇ ದಾಖಲೆಗಳ ಬಂಡಲ್ ಅನ್ನು ಎತ್ತಿನಗಾಡಿಯಲ್ಲಿ ತುಂಬಿಸಿಕೊಂಡು ಮನೆಗೆ ಕರೆದೊಯ್ದಿರುವ ದೃಶ್ಯ ಈಗ ಜಿಲ್ಲೆಯಲ್ಲಿ ಚರ್ಚೆಯ ಕೇಂದ್ರವಾಗಿದೆ. ಪಿಡಿಒ “16,000 ಪುಟಗಳ ದಾಖಲೆಗಳಿವೆ” ಎಂದು ಹೇಳಿದ ನಂತರ ರವಿಗೆ ಬೇರೆ ಮಾರ್ಗವೇ ಇರಲಿಲ್ಲ.
ಈ ಪ್ರಕರಣ ಬೆಳಕಿಗೆ ಬಂದ ನಂತರ ಅಧಿಕಾರಿಗಳೂ ಬೆಚ್ಚಿಬಿದ್ದಿದ್ದು, “ಒಬ್ಬ ರೈತ ಹಸು ಮಾರಾಟ ಮಾಡಬೇಕಾದ ಪರಿಸ್ಥಿತಿ ಏಕೆ?” ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಗ್ರಾಮಸ್ಥರು ಈಗ 15ನೇ ಹಣಕಾಸು ಯೋಜನೆ ಕಾರ್ಯಗಳಲ್ಲಿ ನಡೆದಿರಬಹುದಾದ ಅವ್ಯವಹಾರಗಳಿಗೆ ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಘಟನೆ ಸಾಮಾನ್ಯ ನಾಗರಿಕನ ಹೋರಾಟ, RTI ಮೂಲಕ ಸತ್ಯವನ್ನು ಹೊರ ತರುವುದು ಎಷ್ಟು ಕಠಿಣವಾಗಬಹುದು ಮತ್ತು ಆಡಳಿತದ ನಿರ್ಲಕ್ಷ್ಯ ಯಾವ ಮಟ್ಟಕ್ಕೆ ಹೋಗಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ.