🚨 BREAKING NEWS :”ಕೊಪ್ಪಳ|ಬೆಂದ ಅನ್ನದಲ್ಲಿ ಹುಳುಗಳು ಪತ್ತೆ: ಬಿಸಿ ಊಟ ಸಿಬ್ಬಂದಿ ನಿರ್ಲಕ್ಷ್ಯಕ್ಕೆ  ಭುಗಿಲೆದ್ದ ಪಾಲಕರ ಆಕ್ರೋಶ”

By admin

🚨 BREAKING NEWS :”ಕೊಪ್ಪಳ|ಬೆಂದ ಅನ್ನದಲ್ಲಿ ಹುಳುಗಳು ಪತ್ತೆ: ಬಿಸಿ ಊಟ ಸಿಬ್ಬಂದಿ ನಿರ್ಲಕ್ಷ್ಯಕ್ಕೆ  ಭುಗಿಲೆದ್ದ ಪಾಲಕರ ಆಕ್ರೋಶ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:

ಕೊಪ್ಪಳ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿತರಿಸಿದ ಬಿಸಿ ಊಟದ ಬೆಂದ ಅನ್ನದಲ್ಲಿ ಹುಳುಗಳು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಸಿಬ್ಬಂದಿಗಳ ನಿರ್ಲಕ್ಷ್ಯ ವಿರುದ್ಧ ಪಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಊಟ ಮಾಡುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿವೆ.

ತಾಲೂಕಿನ ಮುನಿರಾಬಾದ್ ಸಮೀಪದ ಹಳೇ ನಿಂಗಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ವಾರ ಮಧ್ಯಾಹ್ನ ಎಂದಿನಂತೆ ಬಿಸಿ ಊಟ ವಿತರಿಸಲಾಗಿತ್ತು. ಊಟ ಸೇವಿಸುವ ವೇಳೆ ಕೆಲವು ಮಕ್ಕಳ ತಟ್ಟೆಗಳಲ್ಲಿ ಬೆಂದ ಅನ್ನದ ಜೊತೆಗೆ ಹುಳುಗಳು ಕಂಡುಬಂದಿವೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಅನ್ನವನ್ನು ಚೆಲ್ಲಿ, ಬಿಸಿ ಊಟ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹುಳುಗಳು ಕಂಡುಬಂದ ಕಾರಣ ಹಲವರು ಊಟ ಸೇವಿಸದೆ ಕೈ ತೊಳೆದುಕೊಂಡಿದ್ದಾರೆ.

ಸ್ಥಳೀಯರ ಆರೋಪದಂತೆ, ಬಿಸಿ ಊಟ ತಯಾರಿಕೆಗೂ ಮುನ್ನ ಅಕ್ಕಿ ಅನ್ನ ಮಾಡಲು ಯೋಗ್ಯವೇ ಎಂಬುದನ್ನು ಪರಿಶೀಲಿಸಬೇಕಾದರೂ, ಈ ಪ್ರಕ್ರಿಯೆ ಪಾಲನೆಯಾಗಿಲ್ಲ. ಬಹಳ ದಿನಗಳ ಹಿಂದೆ ಸಂಗ್ರಹಿಸಿಟ್ಟ ಅಕ್ಕಿಯನ್ನು ಸೂಕ್ತ ಶುದ್ಧೀಕರಣವಿಲ್ಲದೆ ನೇರವಾಗಿ ಅಡುಗೆಗೆ ಬಳಸಿದ ಪರಿಣಾಮ, ಅಕ್ಕಿಯಿಂದ ಹುಳುಗಳನ್ನು ಬೇರ್ಪಡಿಸದೆ ಅನ್ನ ಮಾಡಲಾಗಿದೆ. ಇದರಿಂದ ಹುಳುಗಳು ಅನ್ನದ ಜೊತೆಗೆ ಬೆಂದು ಹೋಗಿವೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಮಕ್ಕಳ ಆರೋಗ್ಯದ ಬಗ್ಗೆ ಪಾಲಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಹ್ಯಾಟಿ, “ವಿಷಯ ನಮ್ಮ ಗಮನಕ್ಕೆ ಬಂದ ಕೂಡಲೇ ಅಡುಗೆ ಸಿಬ್ಬಂದಿಯನ್ನು ಕರೆಸಿ ಎಚ್ಚರಿಕೆ ನೀಡಿದ್ದೇವೆ. ಅಕ್ಕಿಯನ್ನು ಚೆನ್ನಾಗಿ ತೊಳೆದು ಅಡುಗೆ ಮಾಡಬೇಕು; ಹುಳುಗಳು ಕಂಡುಬಂದರೆ ತಕ್ಷಣ ಬದಲಿಸಬೇಕು. ಆದರೆ ಅಕ್ಷರ ದಾಸೋಹ ಅಧಿಕಾರಿಗಳೇ ಸ್ಟಾಕ್‌ನಲ್ಲಿರುವ ಅಕ್ಕಿಯನ್ನು ಹಂಚುತ್ತಿರುವುದರಿಂದ ಮಕ್ಕಳು ಇಂತಹ ಊಟ ಸೇವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ತಕ್ಷಣ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಮೇಲಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಘಟನೆಯ ಹಿನ್ನೆಲೆಯಲ್ಲಿ ಸಂಬಂಧಿತ ಅಧಿಕಾರಿಗಳು ತನಿಖೆ ನಡೆಸಿ, ಮಕ್ಕಳ ಆರೋಗ್ಯ ಮತ್ತು ಆಹಾರದ ಗುಣಮಟ್ಟವನ್ನು ಖಚಿತಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.