⭐LOCAL EXPRESS:”ಜೇವರ್ಗಿ| ಗ್ರಾಮೀಣ ಪ್ರದೇಶವೇ ದೇಶಿ ಸಾಹಿತ್ಯದ ತವರುಮನೆ : ಡಾ. ಭಗವಂತರಾಯ ಬಳೊಂಡಗಿ ಅಭಿಮತ”

By admin

LOCAL EXPRESS:“ಜೇವರ್ಗಿ| ಗ್ರಾಮೀಣ ಪ್ರದೇಶವೇ ದೇಶಿ ಸಾಹಿತ್ಯದ ತವರುಮನೆ : ಡಾ. ಭಗವಂತರಾಯ ಬಳೊಂಡಗಿ ಅಭಿಮತ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಜೇವರ್ಗಿ:

ದೇಶಿ ಸಾಹಿತ್ಯದ ನಿಜವಾದ ತವರುಮನೆ ಗ್ರಾಮೀಣ ಪ್ರದೇಶವಾಗಿದ್ದು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಉತ್ತಮ ಸಂಸ್ಕಾರ ಹೊಂದಿದ ವ್ಯಕ್ತಿಗಳಾಗುವ ಜೊತೆಗೆ ಉತ್ತಮ ಸಾಹಿತಿಗಳಾಗಬಹುದು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪಟ್ಟಣದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಭಗವಂತರಾಯ ಬಿ. ಬಳೊಂಡಗಿ ಹೇಳಿದರು.

ಅವರು ಜೇವರ್ಗಿಯ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ “ಸಾಲುಮರದ ತಿಮ್ಮಕ್ಕ ವೇದಿಕೆ”ಯ ಮೂಲಕ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನಾ (ಎನ್‌ಎಸ್‌ಎಸ್) ಘಟಕದ ವಾರ್ಷಿಕ ವಿಶೇಷ ಶಿಬಿರದ ಎರಡನೇ ಉಪನ್ಯಾಸ ಮಾಲಿಕೆಯಲ್ಲಿ “ದೇಶಿ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು” ವಿಷಯದ ಕುರಿತು ಉಪನ್ಯಾಸ ನೀಡಿದರು. ಕವಿತೆ, ಕಥೆ, ಕಾದಂಬರಿ, ಲಲಿತ ಪ್ರಬಂಧ, ಚುಟುಕು, ನಾಟಕ ಸಾಹಿತ್ಯಗಳನ್ನು ವಿದ್ಯಾರ್ಥಿಗಳು ನಿತ್ಯ ಓದುವ ಹವ್ಯಾಸ ಬೆಳೆಸಿಕೊಂಡರೆ ಸೃಜನಶೀಲತೆ ಮತ್ತು ಮಾನವೀಯ ಮೌಲ್ಯಗಳು ಬೆಳೆಯುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ರಸಾಯನಿಕ ಶಾಸ್ತ್ರದ ಪ್ರಾಧ್ಯಾಪಕರಾದ ಸುರೇಶ ಗುಡ್ಡಿಯವರು, ದೇಶಿ ಸಾಹಿತ್ಯವು ನಿರ್ದಿಷ್ಟ ಪ್ರದೇಶ, ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧಿಸಿದ ಸಾಹಿತ್ಯವಾಗಿದ್ದು, ಶಿಷ್ಟ ಸಾಹಿತ್ಯಕ್ಕೆ ಭಿನ್ನವಾದ ಸ್ವರೂಪ ಹೊಂದಿದೆ ಎಂದು ವಿವರಿಸಿದರು. ಜನಪದ ಹಾಡುಗಳು, ಕಥೆಗಳು ಹಾಗೂ ಸ್ಥಳೀಯ ಭಾಷೆಯ ಮೂಲಕ ರೂಪುಗೊಂಡಿರುವ ಈ ಸಾಹಿತ್ಯವು ಹಳ್ಳಿಯ ನೆಲಮೂಲದಿಂದಲೇ ಹರಿದು ಬಂದಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಉಪನ್ಯಾಸಕರಾದ ಡಾ. ಪಿಡ್ಡಪ್ಪ ಚನ್ನೂರು ಅವರು, ಸಾಹಿತ್ಯದ ಪ್ರೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡವರು ಸೃಜನಶೀಲ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು. ಪ್ರಾಂಶುಪಾಲರಾದ ಶಿವಶರಣಪ್ಪ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಡಾ. ಸಿದ್ಧಲಿಂಗಪ್ಪ ನಂದೆಪ್ಪನವರ, ಪ್ರಶಾಂತ ಹಾಸು, ಡಾ. ದೇವೇಂದ್ರ ಗುಡೂರು, ಡಾ. ಈರಣ್ಣ ಹವಾಲ್ದಾರ, ನೀತು ರಾಣಿ, ರೇವಣಸಿದ್ದಪ್ಪ ಬುಜರ್ಕ, ಡಾ. ಗೋವಿಂದರಾಜ ಆಲ್ದಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕು. ನಂದಿತಾ ಕಾರ್ಯಕ್ರಮ ನಿರೂಪಿಸಿದರು, ಕು. ಮಲ್ಲಮ್ಮ ಸ್ವಾಗತಿಸಿದರು ಹಾಗೂ ಕು. ಶಾಂತಮ್ಮ ವಂದಿಸಿದರು.