ಮುಡಬೂಳ ಗ್ರಾಮದಲ್ಲಿ ಏಳು ದಿನಗಳ ಸಪ್ತ ಭಜನೆ ಸಂಪನ್ನ
ಭಕ್ತಿಭಾವದಲ್ಲಿ ತೇಲಿದ ಗ್ರಾಮಸ್ಥರು | ಡೊಳ್ಳು, ಭಜನೆಯೊಂದಿಗೆ ಪಲ್ಲಕ್ಕಿ ಭವ್ಯ ಮೆರವಣಿಗೆ
ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ
ತಾಲೂಕಿನ ಮುಡಬೂಳ ಗ್ರಾಮದಲ್ಲಿ ಉತ್ತಮ ಮಳೆಯಾಗಲಿ, ರೈತರ ಬದುಕು ಹಸನಾಗಲಿ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಹಾಗೂ ಲೋಕ ಕಲ್ಯಾಣವಾಗಲಿ ಎಂಬ ಸಂಕಲ್ಪದೊಂದಿಗೆ ಕಳೆದ ಏಳು ದಿನಗಳಿಂದ ಶ್ರೀ ಸಿದ್ಧಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಪ್ತ ಭಜನೆ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಸೋಮವಾರ ಸಂಪನ್ನಗೊಂಡಿತು.

ಮಳೆ ಕೊರತೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗೂಡಿ ದೇವರ ಮೊರೆ ಹೋಗಿ ನಿರಂತರ ಏಳು ದಿನಗಳ ಕಾಲ ಭಜನೆ, ಪೂಜೆ, ನಾಮಸ್ಮರಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಭಜನೆ, ಆರತಿ ಹಾಗೂ ವಿಶೇಷ ಪೂಜೆಗಳು ನಡೆದಿವು, ಮಹಿಳಾ ಭಜನೆ ಮಂಡಳಿಯವರು ಭಕ್ತಿಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.

ಸಮಾರೋಪ ದಿನವಾದ ಸೋಮವಾರ ಗ್ರಾಮದಲ್ಲಿ ಪಲ್ಲಕ್ಕಿ ಡೊಳ್ಳು ಭಜನೆಯೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ನೂರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ “ಹರ ಹರ ಮಹಾದೇವ”, “ಶ್ರೀ ಸಿದ್ಧಲಿಂಗೇಶ್ವರ ಮಹಾರಾಜ ಕೀ ಜಯ” ಎಂಬ ಜಯಘೋಷಗಳನ್ನು ಮೊಳಗಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ನಾಗರ ಬಾವಿಗೆ ತೆರಳಿ ಅಲ್ಲಿ ದೇವರಿಗೆ ಗಂಗಾಸ್ಥಳ ವಿಧಿಯನ್ನು ನೆರವೇರಿಸಿತು. ನಂತರ ಮೆರವಣಿಗೆ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ, ಮಂಗಳಾರತಿ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.
ಕಡಕೋಳ ಮಡಿವಾಳೇಶ್ವರ ಮಹಾಮಠದ ಪೂಜ್ಯ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರು, ಅವಧೂತ ಸದ್ಗುರು ಶ್ರೀ ರಂಗಲಿಂಗೇಶ್ವರ ಮಹಾಮಠದ ಪೂಜ್ಯ ಶ್ರೀ ತ್ರಿಶೂಲಪ್ಪ ಶರಣರು, ಮದ್ರಕಿ ಹಾಗೂ ಶಹಾಪುರದ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಮಾತನಾಡಿ, “ಮುಡಬೂಳ ಗ್ರಾಮಸ್ಥರ ಭಕ್ತಿ ಮತ್ತು ಸೇವಾಭಾವ ಮೆಚ್ಚುವಂತದ್ದು. ಮಳೆಯರಾಯ ಧಾರಾಳವಾಗಿ ಸುರಿದು ರೈತರ ಬೆಳೆ ಸಮೃದ್ಧಿಯಾಗಿ ಬೆಳೆಯಲಿ. ಗ್ರಾಮದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ” ಎಂದು ಆಶೀರ್ವದಿಸಿದರು.

ಬಳಿಕ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಿಸಲಾಯಿತು. ಗ್ರಾಮದ ನೂರಾರು ಭಕ್ತರು ಪ್ರಸಾದ ಸ್ವೀಕರಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಏಳು ದಿನಗಳ ಕಾಲ ಭಜನೆ, ಪೂಜೆ ಹಾಗೂ ಸೇವಾ ಕಾರ್ಯಗಳಲ್ಲಿ ತನು-ಮನ-ಧನದಿಂದ ತೊಡಗಿಸಿಕೊಂಡಿದ್ದ ಗ್ರಾಮಸ್ಥರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಬಸಣ್ಣಗೌಡ ಪೊಲೀಸ್ ಪಾಟೀಲ್ ಹಾಗೂ ಸಂಗಣ್ಣಗೌಡ ಮಾಲಿಪಾಟೀಲ್ ಮಾತನಾಡಿ, “ಸಪ್ತ ಭಜನೆ ಯಶಸ್ವಿಯಾಗಲು ಸಹಕರಿಸಿದ ಗ್ರಾಮದ ಹಿರಿಯರು, ಯುವಕರು, ಮಹಿಳಾ ಭಜನೆ ಮಂಡಳಿಯ ಸದಸ್ಯರು, ಪ್ರಸಾದ ವ್ಯವಸ್ಥೆ ಮಾಡಿದವರು, ದಾನಿಗಳು ಹಾಗೂ ಪರೋಕ್ಷ-ಪ್ರತ್ಯಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಗ್ರಾಮಸ್ಥರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಶ್ರೀ ಸಿದ್ಧಲಿಂಗೇಶ್ವರ ಕೃಪೆಯಿಂದ ಉತ್ತಮ ಮಳೆಯಾಗಿ ರೈತರ ಬದುಕು ಸುಧಾರಿಸಲಿ” ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸಿದ್ದಲಿಂಗಯ್ಯ ಸ್ವಾಮಿ ಗಣಾಚಾರಿ, ನಾದಯ್ಯಸ್ವಾಮಿ ಗಣಾಚಾರಿ, ನಾಗಣ್ಣ ಬುಷ್ಠಿಗಾರ ಸಾಹು, ಈರಣ್ಣ ದೇಸಾಯಿ, ಚಂದ್ರರಾವ್ ಕುಲಕರ್ಣಿ, ಕಲ್ಯಾಣರಾವ್ ಕುಲಕರ್ಣಿ, ವಿಶ್ವಾರಾಧ್ಯ ದೇಸಾಯಿ, ಶ್ರೀನಿವಾಸ ಅಂಗಡಿ, ಶ್ರೀಶೈಲಪ್ಪ ಸಾಹು, ಸಂಗಣ್ಣ ಸಾಹು, ವಿಶ್ವರಾಧ್ಯ ಚನ್ನಪಟ್ಟಣ, ಮಾಹಾಂತೇಶ ಮಾಲಗತ್ತಿ, ಶ್ರೀಶೈಲ ಮಡಿವಾಳರ, ಬಸವರಾಜ ಸಜ್ಜನ, ಹಣಮಂತ ಯಂಕಂಚಿ, ಗುರಣ್ಣ ಸಾಹು, ಗುರಣ್ಣ ಬಡಕಲ್, ಶರಣಪ್ಪ ಬಬಲಾದಿ, ಮಾದೇವಪ್ಪ ಬಬಲಾದಿ, ದೇವಣ್ಣ ಕುನ್ನೂರು, ಗೋಪಾಲ ಗೋಪಾಳಿ, ರವಿಕುಮಾರ ಬಬಲಾದಿ, ನಿಂಗಣ್ಣ ಗೋಪಾಳಿ, ಸಿದ್ದು ತಟ್ಟಿಮನಿ, ಸಿದ್ದು ಕರಿಬಾವಿ, ಜಗನ್ನಾಥ ಹೊಸಳ್ಳಿ, ಕೃಷ್ಣಪ್ಪ ನಾಯಿಕೂಡಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಮಹಿಳಾ ಭಜನೆ ಮಂಡಳಿಯ ಸದಸ್ಯರು, ಯುವಕರು, ಹಿರಿಯರು ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.
…..
