202 ಅಕ್ರಮ ಪಡಿತರ ಚೀಲಗಳ ಜಪ್ತಿ

By admin

ಶಹಾಪುರ ತಾಲ್ಲೂಕಿನಲ್ಲಿ ಉಕ್ಕಿನಾಳದಲ್ಲಿ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಪತ್ತೆ

202 ಅಕ್ರಮ ಪಡಿತರ ಚೀಲಗಳ ಜಪ್ತಿ

ಸೆಕ್ಯುಲರ್ ವಾಯ್ಸ್ ‌ನ್ಯೂಸ್ ಶಹಾಪುರ
ತಾಲೂಕಿನ ಉಕ್ಕನಾಳ ಸೀಮಾಂತರದಲ್ಲಿರುವ ಚಾಮನಾಳ ತಾಂಡಾದ ವ್ಯಕ್ತಿಯೊಬ್ಬರ ಹೊಲದ ಗೋಡೌನ್ ಮೇಲೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಗೋಗಿ ಪೊಲೀಸ್ ಠಾಣೆ ಅಧಿಕಾರಿಗಳು ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 202 ಚೀಲಗಳ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.


ಯಾದಗಿರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಆಹಾರ ನಿರೀಕ್ಷಕ ಸಂಜೀವ್ ನಿಂಗಪ್ಪ ಕವಲಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತು. ಗೋಗಿ ಪೊಲೀಸ್ ಠಾಣೆಯ ಪಿಎಸ್‌ಐ ಚಂದ್ರನಾಥ್, ಎಎಸ್‌ಐ ಬಂದೇನವಾಜ್, ಹೆಡ್ ಕಾನ್ಸ್‌ಟೇಬಲ್ ಪ್ರೇಮಸಿಂಗ್, ಪೊಲೀಸ್ ಕಾನ್ಸ್‌ಟೇಬಲ್ ರಾಮಣ್ಣ, ಆಹಾರ ನಿರೀಕ್ಷಕ ಬಸವರಾಜ ಪತ್ತಾರ, ಗ್ರಾಮ ಸಹಾಯಕರಾದ ದಾವಲಸಾಬ್ ಶೇಖಸಿಂದಿ ಮತ್ತು ಮಹೇಶ್ ನಾಯ್ಯೋಡಿ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಅಧಿಕಾರಿಗಳ ತಂಡ ಉಕ್ಕನಾಳ ಸೀಮಾಂತರದಲ್ಲಿರುವ ಲೋಹಿತ್ ತಂದೆ ಕಿಶನ್ ರಾಠೋಡ ಅವರ ಹೊಲದ ಮನೆಗೆ ಭೇಟಿ ನೀಡಿದ ವೇಳೆ ಮನೆಯ ಮುಂದೆ ಇದ್ದ ವ್ಯಕ್ತಿ ತನ್ನನ್ನು ಲೋಹಿತ್ ರಾಠೋಡ ಎಂದು ಪರಿಚಯಿಸಿಕೊಂಡು ಅಧಿಕಾರಿಗಳನ್ನು ಕಂಡ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಬಳಿಕ ಪಂಚರ ಸಮ್ಮುಖದಲ್ಲಿ ಮನೆಯ ಕೊಠಡಿಯನ್ನು ಪರಿಶೀಲಿಸಿದಾಗ ವಿವಿಧ ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿ ಪತ್ತೆಯಾಯಿತು. ಎಣಿಕೆ ಹಾಗೂ ತೂಕ ಪರಿಶೀಲನೆ ನಡೆಸಿದಾಗ 40 ಕೆಜಿ ತೂಕದ 165 ಚೀಲಗಳು, 42 ಕೆಜಿ ತೂಕದ 30 ಚೀಲಗಳು ಮತ್ತು 45 ಕೆಜಿ ತೂಕದ 7 ಚೀಲಗಳು ಸೇರಿದಂತೆ ಒಟ್ಟು 202 ಚೀಲಗಳಲ್ಲಿ 8,175 ಕೆಜಿ ಪಡಿತರ ಅಕ್ಕಿ ಇರುವುದು ದೃಢಪಟ್ಟಿತು.
ಜಪ್ತಿ ಮಾಡಿದ ಅಕ್ಕಿಯಿಂದ 2 ಕೆಜಿ ಮಾದರಿಯನ್ನು (ಸ್ಯಾಂಪಲ್) ಸಂಗ್ರಹಿಸಿ ಸೀಲ್ ಮಾಡಲಾಗಿದ್ದು, ಉಳಿದ ಅಕ್ಕಿಯನ್ನು ಪಂಚರ ಸಮ್ಮುಖದಲ್ಲಿ ಜಪ್ತಿ ಮಾಡಿ ಖಾಸಗಿ ಲಾರಿಯ ಮೂಲಕ ಗೋಗಿ ಪೊಲೀಸ್ ಠಾಣೆಗೆ ಸಾಗಿಸಲಾಯಿತು. ಜಪ್ತಿ ಮಾಡಿದ ಪಡಿತರ ಅಕ್ಕಿಯ ಅಂದಾಜು ಮೌಲ್ಯ ₹1,89,544 ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಲೋಹಿತ್ ತಂದೆ ಕಿಶನ್ ರಾಠೋಡ, ಚಾಮನಾಳ ತಾಂಡಾ ಹಾಗೂ ಇತರರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಆಹಾರ ನಿರೀಕ್ಷಕರು ಗೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.