💢LOCAL EXPRESS:” ಕಲಬುರಗಿ-ಬೆಂಗಳೂರು ವಿಮಾನ ಸೇವೆ ಸ್ಥಗಿತ:  ಪ್ರಯಾಣಿಕರಿಗೆ ತೀವ್ರ ತೊಂದರೆ! ಪುನಃ ಆರಂಭಕ್ಕೆ ನರಸಿಂಹ ಮೆಂಡನ್‌,ಪೆರ್ಲ್ ಒತ್ತಾಯ!!

By admin

💢LOCAL EXPRESS:ಕಲಬುರಗಿ-ಬೆಂಗಳೂರು ವಿಮಾನ ಸೇವೆ ಸ್ಥಗಿತ:  ಪ್ರಯಾಣಿಕರಿಗೆ ತೀವ್ರ ತೊಂದರೆ! ಪುನಃ ಆರಂಭಕ್ಕೆ ಮೆಂಡನ್,ಪೆರ್ಲ್ ಒತ್ತಾಯ!!

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕಲಬುರಗಿ:

ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕೇಂದ್ರವಾದ ಕಲಬುರಗಿಯಲ್ಲಿ ಕಾರ್ಯಾಚರಿಸುತ್ತಿದ್ದ ವಿಮಾನ ನಿಲ್ದಾಣವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗದ್ದಾಟದಿಂದ ಬಡಪಾಯಿಯಾಗಿದೆ. ಕಲಬುರಗಿ-ಬೆಂಗಳೂರು ವಿಮಾನ ಸೇವೆ ಅಕ್ಟೋಬರ್ 15 ರಿಂದ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ. ಸಾರ್ವಜನಿಕರ ಬೇಡಿಕೆಗಳಿಗೆ ಗಾಢ ಮೌನದಿಂದ ಪ್ರತಿಕ್ರಿಯೆ ನೀಡುತ್ತಿರುವ ಜನಪ್ರತಿನಿಧಿಗಳು ವಿಮಾನ ಸೇವೆ ಪುನರಾರಂಭಕ್ಕೆ ಯಾವುದೇ ಒತ್ತಡ ಹಾಕದಿರುವುದು ತೀವ್ರ ಖಂಡನೀಯ ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷ ಡಾ. ಸದಾನಂದ ಪೆರ್ಲ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಸದಸ್ಯ ನರಸಿಂಹ ಮೆಂಡನ್ ಹೇಳಿದ್ದಾರೆ.

•ವಿಮಾನ ಸೇವೆಯ ಸ್ಥಗಿತ ಪರಿಣಾಮ:
ಕಲ್ಯಾಣ ಕರ್ನಾಟಕ ಭಾಗದ ಪ್ರವಾಸೋದ್ಯಮ, ಶಿಕ್ಷಣ, ಕೈಗಾರಿಕೆ, ವೈದ್ಯಕೀಯ ಉದ್ಯೋಗ ಹಾಗೂ ವಾಣಿಜ್ಯ ಕ್ಷೇತ್ರಗಳಿಗೆ ಈ ಸೇವೆಯ ಸ್ಥಗಿತವು ತೀವ್ರ ಪರಿಣಾಮ ಉಂಟುಮಾಡಿದೆ. ನೌಕರರು, ವಿದ್ಯಾರ್ಥಿಗಳು, ವೈದ್ಯಕೀಯ ಸೌಲಭ್ಯಕ್ಕೆ ತುರ್ತು ಪ್ರಯಾಣ ಮಾಡುವವರು, ಮತ್ತು ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ನವಿಮುಂಬೈ, ಮಂಗಳೂರು, ದೆಹಲಿ, ಮುಂಬೈ, ತಿರುಪತಿ ನಡುವೆ ವಿಮಾನ ಸಂಪರ್ಕ ಇಲ್ಲದಿರುವುದರಿಂದ ಪ್ರಯಾಣಿಕರಿಗೆ ಸಂಕಷ್ಟ ಹೆಚ್ಚಾಗಿದೆ.

• ಕಾರ್ಗೋ ಸೇವೆ ಹಾಗೂ ಕೃಷಿ:
ಕಲಬುರಗಿ ವಿಮಾನ ನಿಲ್ದಾಣವು ಜಿಐ ಟ್ಯಾಗ್ ಹೊಂದಿದ ತೊಗರಿ ಕಣಜವಾಗಿದೆ. ಈ ಪ್ರದೇಶದ ಇತರ ಕೃಷಿ ಉತ್ಪನ್ನಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಾಗಿಸಲು ವಿಮಾನ ಸೇವೆ ಮುಖ್ಯವಾಗಿದೆ. ಆದರೆ ಸೇವೆ ಸ್ಥಗಿತವಾದುದರಿಂದ ಕಾರ್ಗೋ ಹಾಗೂ ಕೃಷಿ ವ್ಯಾಪಾರಗಳಲ್ಲೂ ತೀವ್ರ ನಷ್ಟ ಉಂಟಾಗಿದೆ.

ಪುನರಾರಂಭಕ್ಕೆ ಒತ್ತಾಯ:
ಚಳಿಗಾಲದ ವಿಧಾನಸಭೆ ಅಧಿವೇಶನದ ವೇಳೆ ಕಲ್ಯಾಣ ಕರ್ನಾಟಕದ ಶಾಸಕರು ಒಗ್ಗಟ್ಟಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆದು ವಿಮಾನ ಸೇವೆ ಪುನರಾರಂಭಕ್ಕೆ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕು. ನವಿ ಮುಂಬೈ ನೂತನ ವಿಮಾನ ನಿಲ್ದಾಣದಿಂದ ಕಲಬುರಗಿ-ಮುಂಬೈ ಸಂಪರ್ಕ ಈಗಾಗಲೇ ಸಾಧ್ಯವಾಗಿದ್ದು, ಮುಂದಿನ ಪ್ರಯಾಣಿಕರ ಅನುಕೂಲಕ್ಕಾಗಿ ತಕ್ಷಣ ಸೇವೆ ಪುನರಾರಂಭ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.