🔴CRIME NEWS: “ಗದಗ|ಹಾಸ್ಟೆಲ್‌ನಲ್ಲಿ BAMS ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಕುಟುಂಬಸ್ಥರಿಂದ ಕೊಲೆ ಆರೋಪ‌ ಶಂಕೆ”

By admin

🔴CRIME NEWS: “ಗದಗ|ಹಾಸ್ಟೆಲ್‌ನಲ್ಲಿ ಬಿಎಎಂಎಸ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಕುಟುಂಬಸ್ಥರಿಂದ ಕೊಲೆ ಆರೋಪ ಶಂಕೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗದಗ: 

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಖಾಸಗಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ BAMS ವಿದ್ಯಾರ್ಥಿಯೊಬ್ಬನು ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತ ವಿದ್ಯಾರ್ಥಿಯನ್ನು ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಧನ್ನೂರ (ಎಸ್) ಗ್ರಾಮದ ನಿವಾಸಿ ಈಶ್ವರ ಗಾದಗೆ (21) ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಶವವನ್ನು ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಕಾಲೇಜು ಆಡಳಿತದ ಹೇಳಿಕೆಯನ್ನು ತಳ್ಳಿಹಾಕಿರುವ ಕುಟುಂಬಸ್ಥರು, ಇದು ಆತ್ಮಹತ್ಯೆಯಲ್ಲ, ಪೂರ್ವನಿಯೋಜಿತ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್ ನಮ್ಮ ಮಗನ ಬರವಣಿಗೆಯಲ್ಲ. ಕಾಲೇಜಿನವರೇ ನಕಲಿ ಡೆತ್ ನೋಟ್ ಸೃಷ್ಟಿಸಿದ್ದಾರೆ ಎಂದು ಅವರು ದೂರಿದ್ದಾರೆ. ಡೆತ್ ನೋಟ್‌ನಲ್ಲಿ ‘ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಉಲ್ಲೇಖಿಸಿರುವುದನ್ನೂ ಕುಟುಂಬಸ್ಥರು ಪ್ರಶ್ನಿಸಿದ್ದಾರೆ.

ಮೃತನ ದೇಹದ ಮೇಲೆ ಗಾಯಗಳ ಗುರುತುಗಳು ಕಂಡುಬಂದಿದ್ದು, ಕುತ್ತಿಗೆಯ ಭಾಗದಲ್ಲಿ ರಕ್ತದ ಕಲೆಗಳು ಹಾಗೂ ಕಾಲಿನ ಬೆರಳಿನ ಉಗುರು ಕಿತ್ತುಹಾಕಿರುವ ಗುರುತುಗಳು ಸ್ಪಷ್ಟವಾಗಿವೆ. ಇದರಿಂದ ಚಿತ್ರಹಿಂಸೆ ನೀಡಿ ಕೊಲೆ ಮಾಡಿ ನಂತರ ನೇಣು ಹಾಕಲಾಗಿದೆ ಎಂಬ ಶಂಕೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈಶ್ವರ ಗಾದಗೆ ಓದಿನಲ್ಲಿ ಅತ್ಯಂತ ಪ್ರತಿಭಾವಂತನಾಗಿದ್ದು, ಎಲ್ಲಾ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣನಾಗಿದ್ದನು. ಆರು ತಿಂಗಳ ಹಿಂದೆ ಕಾಲೇಜಿನ ಉಪನ್ಯಾಸಕರ ಕಿರುಕುಳದಿಂದ ಬೇಸತ್ತು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು ಎನ್ನಲಾಗಿದೆ. ಈ ಕಾಲೇಜಿನಲ್ಲಿ ಇದಕ್ಕೂ ಮುನ್ನವೂ ವಿದ್ಯಾರ್ಥಿಗಳ ಸಾವುಗಳು ಸಂಭವಿಸಿ ಪ್ರಕರಣಗಳನ್ನು ಮುಚ್ಚಿಹಾಕಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ಘಟನೆಯ ಮಾಹಿತಿ ಪಡೆದ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮರಣದ ನಿಜವಾದ ಕಾರಣ ಬಹಿರಂಗವಾಗಬೇಕೆಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.