🚨SHOCKING NEWS :“ಬಾಗಲಕೋಟೆ|ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿನಿಯರು ವಿಜಯಪುರ ಬಸ್ ನಿಲ್ದಾಣದಲ್ಲಿ ಪತ್ತೆ”
•ಸೆಕ್ಯುಲರ್ ವಾಯ್ಸ್ ನ್ಯೂಸ್ ಬಾಗಲಕೋಟೆ:
ನಗರದ ಮೂರಾರ್ಜಿ ಬಾಲಕಿಯರ ವಸತಿ ಶಾಲೆಯ 10ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ಏಕಾಏಕಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಅಂತ್ಯ ಕಂಡಿದ್ದು, ಅವರು ಇಂದು ನಸುಕಿನ ಜಾವ ವಿಜಯಪುರ ಬಸ್ ನಿಲ್ದಾಣದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ನಿನ್ನೆ ಸಂಜೆ ಸುಮಾರು 6 ಗಂಟೆ ವೇಳೆಗೆ ವಸತಿ ಶಾಲೆಯಲ್ಲಿದ್ದ ವಿದ್ಯಾರ್ಥಿನಿಯರು ಹಾಸ್ಟೆಲ್‌ನ ಕಾಂಪೌಂಡ್ ಹಾರಿ ಹೊರಗೆ ತೆರಳಿದ್ದು, ನಂತರ ಅವರ ಸುಳಿವು ಸಿಗದೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿನಿಯರು ನಾಪತ್ತೆಯಾದ ಹಲವು ಗಂಟೆಗಳ ಬಳಿಕ ಮಾತ್ರ ಹಾಸ್ಟೆಲ್ ಸಿಬ್ಬಂದಿ ಎಚ್ಚೆತ್ತುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ತಡರಾತ್ರಿ ಬಾಗಲಕೋಟೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತು ದೂರು ದಾಖಲಾಗಿದ್ದು, ದೂರು ಆಧರಿಸಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ವಿದ್ಯಾರ್ಥಿನಿಯರ ಮೊಬೈಲ್ ಲೊಕೇಷನ್ ಪತ್ತೆ ಹಚ್ಚಿ ಶೋಧ ಕಾರ್ಯ ನಡೆಸಿದರು. ಅದರ ಫಲವಾಗಿ ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ವಿಜಯಪುರ ಬಸ್ ನಿಲ್ದಾಣದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ.
ವಿದ್ಯಾರ್ಥಿನಿಯರು ವಿಜಯಪುರಕ್ಕೆ ತೆರಳಲು ಕಾರಣವೇನು, ನಾಪತ್ತೆಗೆ ನಿಖರ ಕಾರಣಗಳೇನು ಎಂಬ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ, ವಸತಿ ಶಾಲೆಯ ಪ್ರಿನ್ಸಿಪಾಲ್, ವಾರ್ಡನ್ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದ ಕುರಿತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.