ಮದ್ಯ, ಮಾದಕ ವಸ್ತುಗಳ ವಿರುದ್ಧ ಸಾಮೂಹಿಕ ಹೋರಾಟ ಅಗತ್ಯ; ಸಲಾದಪುರ
ಸಾಣೇಹಳ್ಳಿಯಲ್ಲಿ ಮಠಾಧೀಶರ ದುಂಡುಮೇಜಿನ ಸಭೆಯ ಪೂರ್ವಭಾವಿ ಸಿದ್ಧತಾ ಸಭೆ

ಸೆಕ್ಯುಲರ್ ವಾಯ್ಸ್ ನ್ಯೂಸ್ ಹೊಸದುರ್ಗ
ಮದ್ಯಪಾನ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮದಿಂದ ಕುಟುಂಬ ಮತ್ತು ಸಮಾಜವನ್ನು ರಕ್ಷಿಸಲು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕೈಜೋಡಿಸಬೇಕು ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಕರೆ ನೀಡಿದರು.
ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾಮಠದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಜಾಗೃತಿ ಶಿಬಿರಗಳ ಆಯೋಜನೆ ಮತ್ತು ಕಾರ್ಯನಿರ್ವಹಣೆ ಕುರಿತು ರಾಜ್ಯದ ಮಠಾಧೀಶರ ದುಂಡುಮೇಜಿನ ಸಭೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಮದ್ಯಪಾನದಂತಹ ಮಾರಕ ದುಶ್ಚಟಗಳು ಕೌಟುಂಬಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಯುವ ಪೀಳಿಗೆ ದೇಶದ ಆಸ್ತಿಯಾಗಿದ್ದು, ಅದೇ ಯುವಜನತೆ ದುಶ್ಚಟಗಳಿಗೆ ಬಲಿಯಾದರೆ ಸಮಾಜದ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯ ವಿರುದ್ಧ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಮದ್ಯಪಾನ ನಿಯಂತ್ರಣವು ಯಾರೊಬ್ಬರ ಹೊಣೆಗಾರಿಕೆಯಲ್ಲ. ಸಮಾಜದ ಎಲ್ಲ ವರ್ಗದ ಜನರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಮದ್ಯಮುಕ್ತ ಸಮಾಜ ನಿರ್ಮಾಣ ಸಾಧ್ಯ. ಮುಂದಿನ ದಿನಗಳಲ್ಲಿ ಮಠಾಧೀಶರು ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ದುಂಡುಮೇಜಿನ ಮಹಾಸಮಾವೇಶದ ಕಾರ್ಯಯೋಜನೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಸಮಾಜದಲ್ಲಿ ದುಶ್ಚಟಗಳಿಂದ ಕುಟುಂಬಗಳನ್ನು ಸಂರಕ್ಷಿಸುವುದು ಸವಾಲಿನ ಕೆಲಸವಾಗಿದ್ದು, ನಿರಾಶರಾಗದೆ ಸಂಘಟಿತವಾಗಿ ಹೋರಾಟ ನಡೆಸಬೇಕು. ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜನರಲ್ಲಿ ನಿರಂತರ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಸಭೆಯಲ್ಲಿ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ನಿಶ್ಚಲಾನಂದ ಸ್ವಾಮೀಜಿ, ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ, ಇಳಕಲ್ಲಿನ ಗುರುಮಹಾಂತ ಸ್ವಾಮೀಜಿ, ಶಹಾಪುರ ತಾಲೂಕಿನ ಮೂಡಬೂಳದ ಶ್ರೀ ಸದ್ಗುರು ತ್ರಿಶೂಲಪ್ಪ ಶರಣರು, ಶಹಾಪುರದ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಶ್ರೀ ಶರಣು ಬಿ. ಗದ್ದುಗೆ, ಶ್ರೀ ಶಿವಪ್ರಿಯಾನಂದ ಸ್ವಾಮೀಜಿ, ಬ್ರಹ್ಮಕುಮಾರಿ ಲೀಲಕ್ಕ ಸೇರಿದಂತೆ ವಿವಿಧ ಮಠಾಧೀಶರು, ಚಿಂತಕರು ಹಾಗೂ ಮದ್ಯನಿಷೇಧ ಆಂದೋಲನದ ಪ್ರಮುಖರು ಉಪಸ್ಥಿತರಿದ್ದರು.
