ಅರ್ಹ ಮತದಾರರ ಹೆಸರು ಕೈಬಿಡುವ ಯಾವುದೇ ಪ್ರಯತ್ನ ಸಹಿಸುವುದಿಲ್ಲ: ನಟ, ಸಾಮಾಜಿಕ ಹೋರಾಟಗಾತ ಪ್ರಕಾಶ್ ರೈ
ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ

ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಯಾವುದೇ ರೀತಿಯ ಪ್ರಯತ್ನವನ್ನು ಒಪ್ಪಿಕೊಳ್ಳುವುದಿಲ್ಲ. ಮತದಾನದ ಹಕ್ಕು ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಹಕ್ಕಾಗಿದ್ದು, ಎಸ್ಐಆರ್ (Special Intensive Revision) ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಯಾವುದೇ ಕಾರಣಕ್ಕೂ ಹೊರಗುಳಿಯದಂತೆ ಚುನಾವಣಾ ವ್ಯವಸ್ಥೆ ಅಗತ್ಯ ಎಚ್ಚರಿಕೆ ವಹಿಸಬೇಕು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಹೇಳಿದರು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಳೆ ಪ್ರವಾಸಿ ಮಂದಿರದಲ್ಲಿ ಬುಧವಾರ ಎಸ್ಐಆರ್ ಕುರಿತು ಮಾತನಾಡಿದ ಅವರು, “ಇದು ನನ್ನೊಬ್ಬರ ಮತದ ಪ್ರಶ್ನೆಯಲ್ಲ. ಎಸ್ಐಆರ್ ದೊಡ್ಡ ವಿಷಯವಾಗಿದ್ದು, ಕರ್ನಾಟಕದ ನಾಗರಿಕ ಸಮಾಜ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅರ್ಹ ಮತದಾರರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ” ಎಂದರು.
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾರರ ದಾಖಲೆ, ಅರ್ಹತೆ ಹಾಗೂ ಪಟ್ಟಿಯಿಂದ ಹೊರಗುಳಿಯುವ ವಿಚಾರಗಳ ಕುರಿತು ನ್ಯಾಯಾಲಯದ ಮೊರೆ ಹೋದ ಪ್ರಕರಣಗಳಿವೆ. ಸುಪ್ರೀಂ ಕೋರ್ಟ್ ಕೂಡ ಎಸ್ಐಆರ್ ಸಂಬಂಧಿತ ವಿವಿಧ ವಿಚಾರಗಳನ್ನು ಪರಿಶೀಲಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅರ್ಹ ಮತದಾರರಿಗೆ ಯಾವುದೇ ಅನ್ಯಾಯವಾಗದಂತೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ಪ್ರಕಾಶ್ ರೈ ಒತ್ತಾಯಿಸಿದರು.
“ರಾಜ್ಯದಲ್ಲಿ ಇನ್ನೂ ಎರಡು ವರ್ಷಗಳ ಬಳಿಕ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಆದರೆ ಈಗಲೇ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತ್ತಿದೆ. ಮತದಾರರ ಹಕ್ಕಿಗೆ ಧಕ್ಕೆಯಾಗುವಂತಹ ಯಾವುದೇ ಪರಿಸ್ಥಿತಿ ನಿರ್ಮಾಣವಾಗಬಾರದು. ಚುನಾವಣಾ ಆಯೋಗದ ಪ್ರಕ್ರಿಯೆಯಲ್ಲಿ ಅರ್ಹ ನಾಗರಿಕರು ಹೊರಗುಳಿಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.
ಮತದಾರರ ಪಟ್ಟಿಯ ಪರಿಷ್ಕರಣೆಯ ಉದ್ದೇಶ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವುದಲ್ಲ; ಪಟ್ಟಿಯ ಶುದ್ಧೀಕರಣದ ಜೊತೆಗೆ ಅರ್ಹ ಮತದಾರರ ಸೇರ್ಪಡೆ ಮತ್ತು ಹಕ್ಕುಗಳ ರಕ್ಷಣೆಯೂ ಖಚಿತವಾಗಬೇಕು ಎಂದು ಅವರು ಹೇಳಿದರು.
‘ಪ್ರತಿಯೊಬ್ಬರಿಗೂ ಒಂದೇ ಮತ’
“ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯದಂತೆ ದೇಶದಲ್ಲಿ ಪ್ರತಿಯೊಬ್ಬರಿಗೂ ಒಂದೇ ಮತ. ಅಂಬಾನಿ, ಅದಾನಿಗೂ ಒಂದೇ ಮತ; ಸಾಮಾನ್ಯ ನಾಗರಿಕನಿಗೂ ಒಂದೇ ಮತ. ಸಂವಿಧಾನ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಹೀಗಾಗಿ ಮತದಾನದ ಹಕ್ಕಿನ ರಕ್ಷಣೆಗೆ ಎಲ್ಲರೂ ಜಾಗೃತರಾಗಬೇಕು” ಎಂದು ಪ್ರಕಾಶ್ ರೈ ಹೇಳಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ದಾಖಲೆಗಳ ಕೊರತೆ ಅಥವಾ ಇತರ ಕಾರಣಗಳಿಂದ ಬಡವರು, ದಲಿತರು, ಅಲೆಮಾರಿಗಳು, ಸಣ್ಣ ಸಮುದಾಯಗಳು, ಮಧ್ಯಮ ವರ್ಗದವರು ಹಾಗೂ ವಲಸೆ ಹೋಗಿ ಮರಳಿರುವ ನಾಗರಿಕರು ತೊಂದರೆಗೊಳಗಾಗುವ ಸಾಧ್ಯತೆಗಳಿದ್ದರೆ, ಅಂತಹ ಪ್ರಕರಣಗಳನ್ನು ಗುರುತಿಸಿ ಸೂಕ್ತ ದಾಖಲೆಗಳೊಂದಿಗೆ ದಾಖಲಿಸಬೇಕು ಎಂದರು.
“ಮತದಾರರಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ದಾಖಲೆ ಸಹಿತ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಸುಮಾರು 100 ಮತಗಟ್ಟೆಗಳಲ್ಲಿ ನಾಗರಿಕ ಮತಗಾವಲು ಸಮಿತಿ ಸದಸ್ಯರು ಹಾಗೂ ಸ್ಥಳೀಯ ನಾಗರಿಕರೊಂದಿಗೆ ಸೇರಿ ಸಮಸ್ಯೆಗಳ ಕುರಿತು ಸಾಕ್ಷ್ಯ ಮತ್ತು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಸೆಪ್ಟೆಂಬರ್ 30ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಮಾಹಿತಿಯನ್ನು ಸಲ್ಲಿಸಿ, ಸಮಸ್ಯೆಯ ತೀವ್ರತೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು” ಎಂದು ತಿಳಿಸಿದರು.
ಸರ್ಕಾರವೂ ಮಧ್ಯಪ್ರವೇಶಿಸಬೇಕು
ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವುದೇ ಅರ್ಹ ನಾಗರಿಕನ ಸಮಸ್ಯೆ ಬಂದರೆ ಅದನ್ನು ಪರಿಶೀಲಿಸಿ ಪರಿಹರಿಸಲು ಆಡಳಿತಾತ್ಮಕ ವ್ಯವಸ್ಥೆ ಸ್ಪಂದಿಸಬೇಕು. ಚುನಾವಣಾ ಆಯೋಗದ ಪ್ರಕ್ರಿಯೆಯಲ್ಲಿ ಜನರಿಗೆ ಅಗತ್ಯ ಮಾಹಿತಿ, ಅವಕಾಶ ಮತ್ತು ಪರಿಹಾರ ವ್ಯವಸ್ಥೆ ದೊರೆಯಬೇಕು ಎಂದು ಪ್ರಕಾಶ್ ರೈ ಹೇಳಿದರು.
“ಕರ್ನಾಟಕದ ಜನರು ತಮ್ಮ ಮತದಾನದ ಹಕ್ಕಿನ ಕುರಿತು ಜಾಗೃತರಾಗಬೇಕು. ಯಾವುದೇ ಅರ್ಹ ನಾಗರಿಕನ ಹೆಸರು ತಪ್ಪಾಗಿ ಹೊರಗುಳಿದಿದ್ದರೆ, ದಾಖಲೆಗಳೊಂದಿಗೆ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಮತದಾರರ ಹಕ್ಕು ರಕ್ಷಣೆಯ ವಿಚಾರದಲ್ಲಿ ಸರ್ಕಾರವೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು” ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು, ಸಾಹಿತಿಗಳು, ಸಾಮಾಜಿಕ ಹೋರಾಟಗಾರರು ಹಾಗೂ ಪ್ರಗತಿಪರ ಚಿಂತಕರು ಈ ವಿಚಾರದಲ್ಲಿ ಜಾಗೃತಿ ಮೂಡಿಸಬೇಕು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಜನರು ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬೇಕು ಎಂದು ಕರೆ ನೀಡಿದರು.
‘ಲಿಂಗತ್ವ ಅಲ್ಪಸಂಖ್ಯಾತರೂ ಹೊರಗುಳಿಯಬಾರದು’
ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ಮಾತನಾಡಿದ ಮಾಯಾ ಎಸ್.ಆರ್. ನಾಯಕ್, “ನಾವು ವಿವಿಧ ಧರ್ಮ, ಜಾತಿ ಮತ್ತು ಸಾಮಾಜಿಕ ಹಿನ್ನೆಲೆಯಿಂದ ಬಂದವರಾಗಿದ್ದೇವೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಅನೇಕರು ತಮ್ಮದೇ ಆದ ಗುರುತು ಹಾಗೂ ಸಾಮಾಜಿಕ ಸಂಕಷ್ಟಗಳೊಂದಿಗೆ ಬದುಕುತ್ತಿದ್ದಾರೆ. ಇಂತಹ ಸಮುದಾಯಗಳ ಅರ್ಹ ಮತದಾರರು ಎಸ್ಐಆರ್ ಪ್ರಕ್ರಿಯೆಯಿಂದ ಹೊರಗುಳಿಯದಂತೆ ವಿಶೇಷ ಗಮನ ನೀಡಬೇಕು” ಎಂದು ಹೇಳಿದರು.
“ನಾವು ಈ ದೇಶದ ಪ್ರಜೆಗಳಲ್ಲವೇ? ನಮ್ಮ ಮತದಾನದ ಹಕ್ಕು ಮತ್ತು ನಾಗರಿಕ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರ ಹಾಗೂ ಚುನಾವಣಾ ವ್ಯವಸ್ಥೆಯ ಮೇಲಿದೆ” ಎಂದು ಅವರು ಪ್ರಶ್ನಿಸಿದರು.
‘ಪ್ರಕಾಶ್ ರೈ ಜನರ ಸಮಸ್ಯೆ ಆಲಿಸುತ್ತಿದ್ದಾರೆ’
ಕೆ.ಎಲ್. ಅಶೋಕ್ ಮಾತನಾಡಿ, “ಕೋಟ್ಯಂತರ ಜನರ ನೋವು, ನಲಿವು ಮತ್ತು ಸಮಸ್ಯೆಗಳನ್ನು ಆಲಿಸಲು ಪ್ರಕಾಶ್ ರೈ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ. ಅವರು ಕೇವಲ ಸಿನಿಮಾ ನಟರಾಗಿ ಉಳಿಯದೆ ಸಾಮಾಜಿಕ ಕಾಳಜಿಯೊಂದಿಗೆ ಜನರ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಿದ್ದಾರೆ” ಎಂದರು.
ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಶರಣ–ಸಂತರ ಸಮಾನತೆಯ ಆಶಯಗಳನ್ನು ಉಳಿಸುವ ನಿಟ್ಟಿನಲ್ಲಿ ಜನರು ಸಂವಿಧಾನಾತ್ಮಕ ಹಕ್ಕುಗಳ ಕುರಿತು ಜಾಗೃತರಾಗಬೇಕು ಎಂದು ಹೇಳಿದರು.
ಕರ್ನಾಟಕದ ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕೃತ ವೇಳಾಪಟ್ಟಿಯಲ್ಲಿ ಕರಡು ಮತದಾರರ ಪಟ್ಟಿ ಸೆಪ್ಟೆಂಬರ್ 20ರಂದು ಪ್ರಕಟವಾಗಿದ್ದು, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 20ರವರೆಗೆ ನಿಗದಿಯಾಗಿದೆ. ಈ ಅವಧಿಯಲ್ಲಿ ಮತದಾರರು ತಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ಸಂಬಂಧಪಟ್ಟ ಅರ್ಜಿ ಅಥವಾ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು.
