ಸಿಡಿಲು ಬಡಿದು ಮಡಿವಾಳಪ್ಪ ದೇವಸ್ಥಾನದ ಗೋಪುರ ಧ್ವಂಸ 

By admin

ಸಿಡಿಲು ಬಡಿದು ಮಡಿವಾಳಪ್ಪ ದೇವಸ್ಥಾನದ ಗೋಪುರ ಧ್ವಂಸ 

ಮಹಿಳೆಗೆ ಗಾಯ, ಚಿಕಿತ್ಸೆ | ಭೇಟಿ‌ ನೀಡಿದ ಅಧಿಕಾರಿಗಳು, ದಲಿತ ಮುಖಂಡರ ಆಕ್ರೋಶ

ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ

ತಾಲೂಕಿನ ಗಂಗನಾಳ ಗ್ರಾಮದಲ್ಲಿ ಸೋಮವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಸಿಡಿಲು ಬಡಿದು ಮಡಿವಾಳಪ್ಪ ದೇವಸ್ಥಾನದ ಗೋಪುರ ಧ್ವಂಸಗೊಂಡಿರುವ ಘಟನೆ ನಡೆದಿದೆ. ಸಿಡಿಲಿನ ತೀವ್ರ ಪರಿಣಾಮದಿಂದ ದೇವಸ್ಥಾನದ ಪಕ್ಕದಲ್ಲಿರುವ ಮನೆಯಲ್ಲಿದ್ದ ಸಂಗಮ್ಮ ಎಂಬ ಮಹಿಳೆಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಸಿಡಿಲು ಬಡಿದ ರಭಸಕ್ಕೆ ದೇವಸ್ಥಾನದ ಗೋಪುರಕ್ಕೆ ಹಾನಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಕುರಿತು ಮಾಹಿತಿ ಲಭ್ಯವಾದರೂ, ಇದುವರೆಗೆ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ದಲಿತ ಮುಖಂಡ ಹೊನ್ನಪ್ಪ ಗಂಗನಾಳ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾನಿಗೊಳಗಾದ ದೇವಸ್ಥಾನ ಹಾಗೂ ಗಾಯಗೊಂಡ ಮಹಿಳೆಯ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ನೆರವು ಮತ್ತು ಪರಿಹಾರ ನೀಡಬೇಕು. ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಹಾನಿಯ ಅಂದಾಜು ಮಾಡಬೇಕು ಎಂದು ಹೊನ್ನಪ್ಪ ಗಂಗನಾಳ ಆಗ್ರಹಿಸಿದ್ದಾರೆ.