ಉತ್ಸವಗಳು ದೇಶಭಕ್ತಿ, ಧರ್ಮ ಜಾಗೃತಿ ಮತ್ತು ರಾಷ್ಟ್ರೀಯ ಏಕತೆಗೆ ಪ್ರೇರಣೆ: ಕಿರಣರಾಮ್
ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ
ನಮ್ಮ ದೇಶದಲ್ಲಿ ಆಚರಿಸಿಕೊಂಡು ಬಂದಿರುವ ಬಹುತೇಕ ಉತ್ಸವಗಳು ಕೇವಲ ಧಾರ್ಮಿಕ ಆಚರಣೆಗಳಾಗಿ ಉಳಿದಿಲ್ಲ. ಅವು ಜನರಲ್ಲಿ ದೇಶಭಕ್ತಿ, ಸನಾತನ ಧರ್ಮದ ಜಾಗೃತಿ ಹಾಗೂ ರಾಷ್ಟ್ರೀಯ ಏಕತೆಯ ಭಾವನೆ ಮೂಡಿಸುವುದರ ಜೊತೆಗೆ, ಸ್ವಾತಂತ್ರ್ಯ ಹೋರಾಟಕ್ಕೂ ಮಹತ್ವದ ಕೊಡುಗೆ ನೀಡಿವೆ ಎಂದು ಹುಬ್ಬಳ್ಳಿಯ ಖ್ಯಾತ ವಾಗ್ಮಿ ಕಿರಣರಾಮ್ ಹೇಳಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ಉತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣೇಶೋತ್ಸವ ಸೇರಿದಂತೆ ನಮ್ಮ ಹಿರಿಯರು ರೂಪಿಸಿದ ಹಲವು ಆಚರಣೆಗಳ ಹಿಂದೆ ವೈಜ್ಞಾನಿಕ, ಸಾಮಾಜಿಕ ಹಾಗೂ ಕೃಷಿ ಬದುಕಿಗೆ ಸಂಬಂಧಿಸಿದ ಹಲವು ಮಹತ್ವದ ಉದ್ದೇಶಗಳಿವೆ. ಇವುಗಳ ಹಿಂದಿರುವ ತಾತ್ವಿಕತೆ ಮತ್ತು ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.
ಸುರಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಶೌರ್ಯ ಸ್ಮರಣೀಯ

ಸಗರನಾಡಿನ ಶೂರ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರನ್ನು ಸ್ಮರಿಸಿದ ಕಿರಣರಾಮ್, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಕಿರಿಯ ವಯಸ್ಸಿನಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಧುಮುಕಿದ ವೀರರು ನಾಲ್ವಡಿ ರಾಜಾ ವೆಂಕಟಪ್ಪ ನಾಯಕರು. ತಮ್ಮ ಸೈನ್ಯವನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಪ್ರಬಲ ಪ್ರತಿರೋಧ ತೋರಿಸಿದ್ದರು. ಅವರ ಹೋರಾಟದ ಸುದ್ದಿ ದೂರದೂರಿಗೂ ಹರಡಿತ್ತು. ಸುರಪುರದ ಈ ವೀರಗಾಥೆ ಸಗರನಾಡಿನ ಶೌರ್ಯ, ಸ್ವಾಭಿಮಾನ ಮತ್ತು ದೇಶಪ್ರೇಮದ ಹೆಮ್ಮೆಯ ಇತಿಹಾಸವಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ನೆಲದ ಇತಿಹಾಸವನ್ನು ಉಲ್ಲೇಖಿಸಿದ ಅವರು, ಇದೇ ನೆಲದಲ್ಲಿ ಕವಿರಾಜಮಾರ್ಗದಂತಹ ಶ್ರೇಷ್ಠ ಕೃತಿಗಳು ರಚನೆಯಾಗಿವೆ. ರಾಷ್ಟ್ರಕೂಟ ಅರಸ ಅಮೋಘವರ್ಷ ನೃಪತುಂಗನಂತಹ ಮಹಾನ್ ಆಡಳಿತಗಾರರು ಈ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಜ್ಞಾನ, ಸಾಹಿತ್ಯ, ಸಂಸ್ಕೃತಿ ಮತ್ತು ತ್ಯಾಗದ ಪರಂಪರೆಯನ್ನು ಹೊಂದಿರುವ ಈ ನೆಲದ ಇತಿಹಾಸವನ್ನು ಯುವಜನತೆ ಅರಿಯಬೇಕು ಎಂದರು.
‘ವಂದೇ ಮಾತರಂ’ಗಾಗಿ ಶಿಕ್ಷೆ ಅನುಭವಿಸಿದ ಬಾಲಕ
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಭಕ್ತಿಯ ಸಂಕೇತವಾಗಿದ್ದ ‘ವಂದೇ ಮಾತರಂ’ ಘೋಷಣೆಯ ಪ್ರಸಂಗವನ್ನು ವಿವರಿಸಿದ ಅವರು, ರಾಮಚಂದ್ರರಾವ್ ಎಂಬ ಬಾಲಕ ಚಿಕ್ಕ ವಯಸ್ಸಿನಲ್ಲಿಯೇ ‘ವಂದೇ ಮಾತರಂ’ ಎಂದು ಘೋಷಿಸಿದ್ದಕ್ಕಾಗಿ ಬ್ರಿಟಿಷರಿಂದ ಕಠಿಣ ಶಿಕ್ಷೆಗೆ ಒಳಗಾದರೂ ದೇಶಭಕ್ತಿಯ ಘೋಷಣೆಯನ್ನು ನಿಲ್ಲಿಸಲಿಲ್ಲ. ಇಂತಹ ಅಪ್ರತಿಮ ತ್ಯಾಗಿಗಳ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.
ದುರ್ಗಾ ಪೂಜೆಯಂತಹ ಧಾರ್ಮಿಕ ಆಚರಣೆಗಳೂ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜನಜಾಗೃತಿಗೆ ವೇದಿಕೆಯಾಗಿ ಬಳಕೆಯಾಗಿದ್ದವು. ಬ್ರಿಟಿಷರ ವಿರುದ್ಧದ ಸಂದೇಶಗಳನ್ನು ಜನರಿಗೆ ತಲುಪಿಸಲು ಪ್ರಸಾದ ವಿತರಣೆಯಂತಹ ಮಾರ್ಗಗಳನ್ನು ಬಳಸಲಾಗುತ್ತಿತ್ತು. ಈ ರೀತಿಯಾಗಿ ಧಾರ್ಮಿಕ ಆಚರಣೆಗಳು ಸಾಮಾಜಿಕ ಮತ್ತು ರಾಷ್ಟ್ರೀಯ ಜಾಗೃತಿಯ ಸಾಧನಗಳಾಗಿದ್ದವು ಎಂದು ಹೇಳಿದರು.
ಕನ್ನಡ ಏಕೀಕರಣಕ್ಕೂ ಹೋರಾಟ
ಆಲೂರು ವೆಂಕಟರಾಯರು ಕನ್ನಡ ಏಕೀಕರಣದ ಮೂಲಕ ರಾಷ್ಟ್ರೀಯತೆಯ ಭಾವನೆಯನ್ನು ಬಲಪಡಿಸಲು ತನು-ಮನ-ಧನದಿಂದ ಹೋರಾಟ ನಡೆಸಿದರು. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಉಳಿವಿಗಾಗಿ ಅವರು ಕೈಗೊಂಡ ಕಾರ್ಯಗಳು ಇಂದಿಗೂ ಸ್ಮರಣೀಯವಾಗಿವೆ. ಇತಿಹಾಸದ ಇಂತಹ ಘಟನೆಗಳನ್ನು ಕೇವಲ ಪುಸ್ತಕಗಳಿಗೆ ಸೀಮಿತಗೊಳಿಸದೆ, ಜನಜೀವನದ ಭಾಗವಾಗಿಸಬೇಕು ಎಂದು ಕಿರಣರಾಮ್ ಹೇಳಿದರು.
ಆಚರಣೆಗಳಲ್ಲಿ ಅಡಗಿದೆ ಅಗಾಧ ಶಕ್ತಿ: ಸೂಗುರೇಶ್ವರ ಶಿವಾಚಾರ್ಯರು
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಕುಂಬಾರ ಓಣಿಯ ಹಿರೇಮಠದ ಪೂಜ್ಯ ಶ್ರೀ ಷ.ಬ್ರ. ಸೂಗುರೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಸನಾತನ ಧರ್ಮದ ಸಂರಕ್ಷಣೆಗೆ ನಾವೆಲ್ಲರೂ ಕಂಕಣಬದ್ಧರಾಗಬೇಕು. ಹಿಂದೂ ಧರ್ಮದ ಪ್ರತಿಯೊಂದು ಆಚರಣೆಯಲ್ಲಿಯೂ ಅಗಾಧವಾದ ತಾತ್ವಿಕ ಮತ್ತು ಸಾಮಾಜಿಕ ಶಕ್ತಿಯಿದೆ. ಅದರ ಅರ್ಥವನ್ನು ಅರಿತು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಪರಂಪರೆಯನ್ನು ಕೊಂಡೊಯ್ಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಡಾ. ಚಂದ್ರಶೇಖರ ಸುಬೇದಾರ, ಹೊನ್ನಾರೆಡ್ಡಿ ವಕೀಲರು, ಅಂಬ್ರೇಶ್ ಗೌಡ ಹೋತಪೇಠ, ಕರಣ ಸುಬೇದಾರ, ಶಿವು ಶಿರವಾಳ, ಸುರೇಶ ಅರಣಿ, ಸುಭಾಷ ದೊರಿ, ಸಚಿನ್ ಕುಮಾರ ನಾಯಕ ಸುರಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾಹಿತಿ ಅಶೋಕ ಚೌದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರ್ಯವರ್ಧನ ಶಾಸ್ತ್ರಿಗಳು ನಿರೂಪಿಸಿದರು. ಅಡಿವೆಪ್ಪ ಜಾಕಾ ಸ್ವಾಗತಿಸಿದರು.
