⭐LOCAL EXPRESS:“ಧಾರವಾಡ | ಸಾಹಿತ್ಯದ ಸೇತುವೆ ಕಟ್ಟಿದ, ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ, ಸಂವಾದ 14 ರಂದು”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಧಾರವಾಡ:
ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ಧ್ವನಿಯಾಗಿ ಗುರುತಿಸಿಕೊಂಡಿರುವ ಹಿರಿಯ ಕವಿ, ವಿಮರ್ಶಕ, ಅನುವಾದಕ ಹಾಗೂ ಸಾಂಸ್ಕೃತಿಕ ರಾಯಭಾರಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ, ಅವರನ್ನು ಅಭಿನಂದಿಸಿ ಅವರ ಬದುಕು–ಬರಹಗಳ ಕುರಿತು ಅವಲೋಕನ ಮಾಡುವ ಸಮಾರಂಭವನ್ನು ಪ್ರೊಗ್ರೆಸಿವ್ ಕಲ್ಚರಲ್ ಅಸೋಸಿಯೇಶನ್ ಆಫ್ ಇಂಡಿಯಾ (PCAI), ಧಾರವಾಡ ಘಟಕವು ಆಯೋಜಿಸಿದೆ.
ಜನಸಾಮಾನ್ಯರ ಬದುಕಿನ ನೋವು–ನಲಿವಿಗೆ ಧ್ವನಿಯಾದ ಪಟ್ಟಣಶೆಟ್ಟಿಯವರು ಕನ್ನಡ–ಹಿಂದಿ ಭಾಷೆಗಳ ನಡುವೆ ಸಾಂಸ್ಕೃತಿಕ ಸೇತುವೆ ನಿರ್ಮಿಸಿ, ಅನೇಕ ಮಹತ್ವದ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ.
ಪ್ರೊಗ್ರೆಸಿವ್ ಕಲ್ಚರಲ್ ಅಸೋಸಿಯೇಶನ್ ಆಫ್ ಇಂಡಿಯಾ (PCAI), ಧಾರವಾಡ ಜಿಲ್ಲಾ ಘಟಕದ ವತಿಯಿಂದ ಧಾರವಾಡ ನಾಡಿನ ಹಿರಿಯ ಸಾಹಿತಿ, ಕವಿ, ವಿಮರ್ಶಕ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು ನಾಳೆ ಡಿ. 14ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು PCAI ರಾಜ್ಯ ಸಂಘಟನಾಕಾರರಾದ ಹಾಗೂ ಚಿತ್ರಕಲಾವಿದೆ ಶ್ರೀಮತಿ ಅಲಕಾ ರಾವ್ ಅವರು ತಿಳಿಸಿದ್ದಾರೆ.
ಈ ಕುರಿತು ಶನಿವಾರ ಸೆಕ್ಯುಲರ್ ವಾಯ್ಸ್ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗೋವಾದ ಖ್ಯಾತ ಸಾಹಿತಿ ಡಾ. ದಾಮೋದರ್ ಮಾವುಜೊ ಅವರು ಉದ್ಘಾಟಿಸಲಿದ್ದಾರೆ. PCAI ಧಾರವಾಡ ಜಿಲ್ಲಾ ಸಂಘಟನಾಕಾರರಾದ ಶ್ರೀ ಎಂ. ಬಿ. ಹುಡೇದ ಅವರು ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಂಡಿಸಲಿದ್ದಾರೆ ಎಂದರು
ಕಾರ್ಯಕ್ರಮದಲ್ಲಿ ‘ಸಿಪ್ ಕಾವ್ಯ’ ವಿಭಾಗದಲ್ಲಿ ಬುಕ್ ಬ್ರಹ್ಮ, ಬೆಂಗಳೂರು ಸಂಸ್ಥೆಯ ಶ್ರೀ ದೇವು ಪತ್ತಾರ, ‘ಸಿಪ್ ಗದ್ಯ’ ವಿಭಾಗದಲ್ಲಿ ಲೇಖಕಿ ಡಾ. ಪ್ರಜ್ಞಾ ಮತ್ತೀಹಳ್ಳಿ (ಧಾರವಾಡ) ಹಾಗೂ ‘ಸಿಪ್ ರಂಗಭೂಮಿ’ ವಿಭಾಗದಲ್ಲಿ ರಂಗಕರ್ಮಿ ಶ್ರೀ ಶಿರೀಷ ಜೋಶಿ (ಬೆಳಗಾವಿ) ಭಾಗವಹಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ಕವಯಿತ್ರಿ ಹಾಗೂ ಸಂಘಟಕಿ ಡಾ. ಹೇಮಾ ಪಟ್ಟಣಶೆಟ್ಟಿ, ಆವಿಷ್ಕಾರ ಬೆಂಗಳೂರು ಸಂಸ್ಥೆಯ ಜಿಲ್ಲಾ ಸಂಚಾಲಕ ಡಾ. ಸುನೀತ್ ಕುಮಾರ್ ಶೆಟ್ಟಿ ಅವರು ಉಪಸ್ಥಿತರಿರಲಿದ್ದಾರೆ ಎಂದರು.
ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರ ,ಹಿರಿಯ ಹೋರಾಟಗಾರ ರಾಮಾಂಜನಪ್ಪ ಆಲ್ಡಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮದ ನಿರೂಪಣೆಯನ್ನುಕಳಕೇಶ್ ಎಸ್. ನಿರ್ವಹಿಸಲಿದ್ದಾರೆ.
ಬಳಿಕ ನಡೆಯುವ ಸಂವಾದದಲ್ಲಿ ಶ್ರೀಮತಿ ಸುನಂದಾ ಕಡಮೆ ಹಾಗೂ ವಿಠಲ ದಳವಾಯಿ ಅವರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.