🛑BREAKING NEWS : “ದಾವಣಗೆರೆ|ಶಿಕ್ಷಣ ಪ್ರೇಮಿ, ವಾಣಿಜ್ಯೋದ್ಯಮಿ, ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ : ಗಣ್ಯರ ಸಂತಾಪ”

By admin

🛑BREAKING NEWS : “ದಾವಣಗೆರೆ|ಶಿಕ್ಷಣ ಪ್ರೇಮಿ, ವಾಣಿಜ್ಯೋದ್ಯಮಿ, ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ: ಗಣ್ಯರ ಸಂತಾಪ”

• ಸೆಕ್ಯುಲರ್‌ ವಾಯ್ಸ್‌  ಡೆಸ್ಕ್‌ ನ್ಯೂಸ್‌ :

ದಾವಣಗೆರೆ ಹಾಲಿ ಶಾಸಕ, ಶಿಕ್ಷಣ ಪ್ರೇಮಿ, ವಾಣಿಜ್ಯೋದ್ಯಮಿ, ಕಾಂಗ್ರೆಸ್‌ನ ಹಿರಿಯ ನಾಯಕ, ವೀರಶೈವ–ಲಿಂಗಾಯತ ಮಹಾಸಭಾ ಅಧ್ಯಕ್ಷರು ಹಾಗೂ ಬಾಪೂಜಿ ಶೈಕ್ಷಣಿಕ ಸಂಘದ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ 6:45ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

16 ಜೂನ್ 1931ರಂದು ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದ ಶಾಮನೂರು ಶಿವಶಂಕರಪ್ಪ ಅವರು ಸರಳತೆ, ಸೇವೆ ಹಾಗೂ ಸಂಘಟನೆ ರಾಜಕಾರಣದ ಮೂಲಕ ಜನಮನ ಗೆದ್ದಿದ್ದರು. ಅವರ ಪತ್ನಿ ಎಸ್.ಎಸ್. ಪಾರ್ವತಮ್ಮ. ದಾವಣಗೆರೆ ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಅವರು ಕಳೆದ ಸುಮಾರು 10 ವರ್ಷಗಳಿಂದ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರು. ಆರು ಬಾರಿ ಶಾಸಕರಾಗಿ ಆಯ್ಕೆಯಾದ ಅವರು ದೀರ್ಘ ರಾಜಕೀಯ ಅನುಭವ ಹೊಂದಿದ್ದರು.

ಕಳೆದ ಮೂರು ದಶಕಗಳ ಕಾಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ ಅವರು ಪಕ್ಷದ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇವರು ಕರ್ನಾಟಕ ರಾಜ್ಯದ ಮಾಜಿ ತೋಟಗಾರಿಕೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಸಚಿವ ಸ್ಥಾನವನ್ನು ಸ್ವೀಕರಿಸಿದ ಕೆಲವೇ ದಿನಗಳಲ್ಲಿ ತೋಟಗಾರಿಕಾ ಇಲಾಖೆಯ ಬಳಿ ಬಳಕೆಯಾಗದೆ ಉಳಿದಿದ್ದ ಸುಮಾರು ₹1,000 ಕೋಟಿ ಅನುದಾನವನ್ನು ರಾಜ್ಯದ ತೋಟಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸಲು ವ್ಯವಸ್ಥಿತವಾಗಿ ಬಳಸುವ ನಿರ್ಧಾರವನ್ನು ಕೈಗೊಂಡು ಆ ಕಾರ್ಯವನ್ನು ಪರಿಣಾಮಕಾರಿಯಾಗಿ ಮುನ್ನಡೆಸಿದ್ದರು.

ಶಿಕ್ಷಣ, ಸಮಾಜಸೇವೆ ಹಾಗೂ ಸಂಘಟನೆ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದ ಅವರು ಹಲವಾರು ಸಮಾಜಮುಖಿ ಕೆಲಸಗಳನ್ನು ಕೈಗೊಂಡಿದ್ದರು. ಅವರ ಪುತ್ರರಾದ ಎಸ್ಎಸ್ ಮಲ್ಲಿಕಾರ್ಜುನ್ ಅವರು ರಾಜ್ಯ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದಾರೆ. ಸೊಸೆ ಪ್ರಭಾ ಮಲ್ಲಿಕಾರ್ಜುನ ಸಂಸದರಾಗಿದ್ದಾರೆ.  ಶಾಮನೂರು ಶಿವಶಂಕರಪ್ಪ ಅವರಿಗೆ ಮೂರು ಪುತ್ರರು ಇದ್ದಾರೆ.

 • ಗಣ್ಯರ ಸಂತಾಪ : 

ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಂಪುಟದ ಎಲ್ಲಾ ಸಚಿವರು, ಶಾಸಕರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಕುಟುಂಬಸ್ಥರು ಹಾಗೂ ವೀರಶೈವ–ಲಿಂಗಾಯತ ಮಹಾಸಭೆಯ ಸರ್ವ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಹ ಶೋಕ ಸಂದೇಶ ಕಳುಹಿಸಿ, ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆ ರಾಜ್ಯ ರಾಜಕಾರಣಕ್ಕೆ ಅಪಾರ ನಷ್ಟವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ಅವರ ಅಂತ್ಯಕ್ರಿಯೆ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಕುಟುಂಬದ ಮೂಲಗಳು ಮುಂದಿನ ಮಾಹಿತಿಯನ್ನು ತಿಳಿಸಲಿವೆ ಎಂದು ತಿಳಿದುಬಂದಿದೆ.