⭐LOCAL EXPRESS:“ಕೊಪ್ಪಳ|ಮಾನವ ಹಕ್ಕುಗಳ ರಕ್ಷಣೆಯಲ್ಲಿ ನ್ಯಾಯಾಲಯಗಳ ಪಾತ್ರ ಮಹತ್ವದ್ದು: ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅಭಿಮತ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ:
ಜಿಲ್ಲಾ ನ್ಯಾಯಾಲಯಗಳು, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳು ಮಾನವ ಹಕ್ಕುಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅವರು ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಬುಧವಾರ ಭ್ರಾತೃತ್ವ ಸಮಿತಿ, ದರ್ಪಣ ಸಂಸ್ಥೆ ಹಾಗೂ ಕೆ.ವಿ.ವಿ.ಯು. ಕೊಪ್ಪಳ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಹಕ್ಕು ಉಲ್ಲಂಘನೆಯಾದರೆ ಪ್ರಕರಣ ದಾಖಲಿಸಿ ಕಾನೂನುಬದ್ಧವಾಗಿ ಪರಿಹಾರ ಪಡೆಯಬಹುದಾಗಿದೆ ಎಂದರು. ಮಾನವ ಹಕ್ಕುಗಳ ಮೂಲ ಉದ್ದೇಶ ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವವನ್ನು ಪ್ರತಿಯೊಬ್ಬರಲ್ಲೂ ಬೆಳೆಸುವುದಾಗಿದೆ. ಹಕ್ಕುಗಳ ಉಲ್ಲಂಘನೆ ಸಂದರ್ಭ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಂದಲೂ ಪರಿಹಾರ ಲಭ್ಯವಿದೆ ಎಂದು ತಿಳಿಸಿದರು.
ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಮಾನವ ಹಕ್ಕುಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಮಕ್ಕಳ, ಯುವಕರ ಹಾಗೂ ಮಹಿಳೆಯರ ಹಕ್ಕುಗಳ ಬಗ್ಗೆ ತಿಳಿದಿದ್ದರೆ ಯಾವುದೇ ಅನ್ಯಾಯಕ್ಕೆ ಒಳಗಾಗುವುದಿಲ್ಲ. ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕನು ತಿಳಿದು ಅನುಸರಿಸಿದರೆ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್ ಮಾತನಾಡಿ, ಕಿನ್ನಾಳ ಗ್ರಾಮದ ವಿದ್ಯಾರ್ಥಿಯೊಬ್ಬರು ಸಮವಸ್ತ್ರ ವಿಚಾರವಾಗಿ ಹೈಕೋರ್ಟ್ ಮೊರೆ ಹೋದ ಪರಿಣಾಮ ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ವಿತರಿಸುವ ಆದೇಶ ಜಾರಿಯಾಯಿತು. ಇದರಿಂದ ಹಕ್ಕುಗಳ ಅರಿವು ಎಷ್ಟು ಮಹತ್ವದದು ಎಂಬುದು ಸಾಬೀತಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕಿ ಅನ್ನಪೂರ್ಣ ಪದ್ಮಸಾಲಿ ಮಾನವ ಹಕ್ಕುಗಳ ಕುರಿತು ಕವನ ವಾಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಭಾರಿ ಉಪಪ್ರಾಂಶುಪಾಲ ಅಬ್ದುಲ್ ಖಯ್ಯುಮ್ ಪರದೆಘರ್ ವಹಿಸಿದ್ದರು.
ಶಿಕ್ಷಕರಾದ ಹುಲುಗಪ್ಪ ಅಡ್ಡಮನಿ, ಎ.ಎ. ನದಾಫ್, ಎಂ.ಎಚ್. ಕುರಿ, ಮಂಜುನಾಥ್ ಸವಡಿ ಹಾಗೂ ಶಿಕ್ಷಕಿಯರಾದ ಸುಜಾತಾ ಮುದಗಲ್, ಭಾಗ್ಯಲಕ್ಷ್ಮಿ, ಫರಹತ್ ಜಹಾನ್, ಶಿವಮ್ಮ, ಶಕುಂತಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.