🟠 LOCAL NEWS : “ಕಾರಟಗಿ | ಮದ್ಯಪಾನ, ಇಸ್ಪೀಟು, ಮಟ್ಕಾ ನಿಷೇಧಕ್ಕೆ ಗ್ರಾಮಸ್ಥರ ಒತ್ತಾಯ “

Contents
🟠 LOCAL NEWS : “ಕಾರಟಗಿ | ಮದ್ಯಪಾನ, ಇಸ್ಪೀಟು, ಮಟ್ಕಾ ನಿಷೇಧಕ್ಕೆ ಗ್ರಾಮಸ್ಥರ ಒತ್ತಾಯ “(ಕಾರಟಗಿ ತಾಲ್ಲೂಕಿನ ಉಳೇನೂರ ಗ್ರಾಮಸ್ಥರು ಮದ್ಯಪಾನ ಇಸ್ಪಟ್ಟು, ಮಟ್ಕಾ ನಿಷೇಧ ಮಾಡುವಂತೆ ಒತ್ತಾಯಿಸಿ ಗಂಗಾವತಿ ಅಬಕಾರಿ ನಿರೀಕ್ಷಕರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು).• ಸೆಕ್ಯುಲರ್ ವಾಯ್ಸ್ ನ್ಯೂಸ್ ಕಾರಟಗಿ :ತಾಲೂಕಿನ ಉಳೇನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಮೂರು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ, ಇಸ್ಪೀಟು ಹಾಗೂ ಮಟ್ಕಾದಂತಹ ಕಾನೂನು ಬಾಹಿರ ಜೂಜು ದಂದೆಗಳು ಯಾವುದೇ ಆತಂಕವಿಲ್ಲದೆ ನಡೆಯುತ್ತಿವೆ ಎಂದು ಉಳೇನೂರು ನಾಗರಿಕರ ಜನಜಾಗೃತಿ ವೇದಿಕೆ ಆರೋಪಿಸಿದೆ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಕಾರಟಗಿ ತಹಶೀಲ್ದಾರರಿಗೆ, ಅಬಕಾರಿ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದ್ದರು.ಗ್ರಾಮದಲ್ಲಿ ವರ್ಷಗಳಿಂದ ಅಕ್ರಮವಾಗಿ ಮಧ್ಯಪಾನ ಮಾರಾಟ, ಇಸ್ಪೀಟು ಮತ್ತು ಓಸಿ (ಮಟ್ಕಾ) ಜೂಜಾಟಗಳು ನಡೆಯುತ್ತಿದ್ದು, ಇದರಿಂದ ಗ್ರಾಮೀಣ ಸಮಾಜದ ಸ್ವಾಸ್ಥ್ಯ ಹಾಗೂ ನೆಮ್ಮದಿ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಅವರು ದೂರಿದರು. ಅಧಿಕಾರಿಗಳ ಗಮನಕ್ಕೆ ಈ ವಿಷಯ ಮರುಮರು ಬಂದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.“ಉಳೇನೂರು ಗ್ರಾಮದಲ್ಲಿ ಮಧ್ಯಪಾನ, ಇಸ್ಪೀಟು ಮತ್ತು ಓಸಿಗಳಂತಹ ದುಶ್ಚಟಗಳನ್ನು ಶಾಶ್ವತವಾಗಿ ನಿಷೇಧಿಸಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಕುಡಿತಕ್ಕೆ ಬಲಿಯಾಗಿ ಮಾರಕ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಅನೇಕ ಬಡ ಕುಟುಂಬಗಳು ಬೀದಿಪಾಲಾಗುತ್ತಿವೆ. ಶಾಲಾ–ಕಾಲೇಜ್ ವಿದ್ಯಾರ್ಥಿಗಳೂ ಮದ್ಯಪಾನಕ್ಕೆ ದಾಸರಾಗುತ್ತಿರುವುದು ಅತ್ಯಂತ ದುರಂತ” ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.ಇನ್ನೊಂದೆಡೆ, ಕುಡಿತದ ಪರಿಣಾಮ ಕೆಲವು ಕುಟುಂಬಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ಜಗಳಗಳು ನಡೆಯುತ್ತಿದ್ದು, ಇದರಿಂದ ಕುಟುಂಬಗಳಲ್ಲಿಯೇ ನೆಮ್ಮದಿ ಕಳೆದು ಹೋಗಿ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಮದ್ಯಪಾನದ ಸಮಸ್ಯೆ ಒಂದೆಡೆ ಇದ್ದರೆ, ಮತ್ತೊಂದೆಡೆ ಸಾರ್ವಜನಿಕರು ಮತ್ತು ಯುವಕರು ಅಕ್ರಮವಾಗಿ ಓಸಿ ಹಾಗೂ ಇಸ್ಪೀಟು ಆಟಗಳಲ್ಲಿ ತೊಡಗಿಕೊಂಡಿದ್ದು, ಇದರಿಂದ ಅನೇಕ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ದೂರಿದರು.ಈ ಹಿನ್ನೆಲೆಯಲ್ಲಿ ಉಳೇನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಎಲ್ಲಾ ಅಕ್ರಮ ಮದ್ಯ ಮಾರಾಟ, ಇಸ್ಪೀಟು ಮತ್ತು ಮಟ್ಕಾ ಜೂಜಾಟಗಳನ್ನು ಸಂಪೂರ್ಣವಾಗಿ ನಿಷೇಧಿಸಿ, ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಳೇನೂರು ನಾಗರಿಕರ ಜನಜಾಗೃತಿ ವೇದಿಕೆ ಮುಖಂಡರು, ಹಿರಿಯರು ಹಾಗೂ ಗ್ರಾಮದ ಸಾರ್ವಜನಿಕರು ಆಗ್ರಹಿಸಿದ್ದಾರೆ.
