BREAKING NEWS : “ಶಹಾಪುರ|ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪ: ಮಲ್ಲಿಕಾರ್ಜುನ ಮುತ್ಯಾನ ವಿರುದ್ಧ ಪೋಕೋ ಪ್ರಕರಣ ದಾಖಲು!
• ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ:
ತಾಲೂಕಿನ ಮಹಲರೋಜಾ ಗ್ರಾಮದ ಮಠದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಮುತ್ಯಾನ ವಿರುದ್ಧ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 25/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 75 ಹಾಗೂ ಪೋಕೋ ಕಾಯ್ದೆಯಡಿ ಶ್ರೀ ಮಲ್ಲಿಕಾರ್ಜುನ ಮುತ್ತಾ (ವಯಸ್ಸು ಸುಮಾರು 30–32) ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಣ್ಣ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಫೆಬ್ರವರಿ 19ರಂದು ಮಠಕ್ಕೆ ಬಂದಿದ್ದ 7 ವರ್ಷದ ಬಾಲಕಿಯೊಂದಿಗೆ ಆರೋಪಿ ಡ್ಯಾನ್ಸ್ ಮಾಡಿರುವುದು, ಕುತ್ತಿಗೆ ಹಿಡಿದು ಎತ್ತಿ ಮಂಚದ ಮೇಲೆ ನಿಲ್ಲಿಸಿರುವುದು ಹಾಗೂ ಮಗುವನ್ನು ಮಡಿಲಲ್ಲಿ ಕೂತಿಸಿಕೊಂಡಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದು ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಸೂಚನೆಯಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯ ಪಾಲಕರು ನೀಡಿದ ಮಾಹಿತಿಯಂತೆ, ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ವೇಳೆ ವಿಡಿಯೋವನ್ನು ಸ್ವಯಂವಾಗಿ ಚಿತ್ರೀಕರಿಸಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನಡೆಸಿದ ಪರಿಶೀಲನೆಯಲ್ಲಿ ಅಪ್ರಾಪ್ತ ಮಗುವಿನೊಂದಿಗೆ ಉದ್ದೇಶಪೂರ್ವಕ ಸ್ಪರ್ಶ ನಡೆದಿರುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಪೋಕೋ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಪ್ರಕರಣದ ತನಿಖೆಯನ್ನು ಗೋಗಿ ಪೊಲೀಸ್ ಠಾಣೆಯ ಪಿಎಸ್‌ಐ ಶಿವರಾಜು ಕೈಗೊಂಡಿದ್ದಾರೆ.