LOCAL EXPRESS : “ಗದಗ | ₹10 ಸಾವಿರ ಲಂಚ ಪಡೆಯುತ್ತಿದ್ದ ಎಎಸ್‌ಐ ಲೋಕಾಯುಕ್ತರ ಬಲೆಗೆ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಗದಗ:
ಗದಗ ಶಹರ ಪೊಲೀಸ್ ಠಾಣೆಯ ಎಎಸ್‌ಐ ಸಿ.ವಿ. ಇಂಗಳಹಳ್ಳಿ ಅವರು ₹10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಕರ್ನಾಟಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪಟ್ಟಣದ ನಿವಾಸಿ ವೀರೇಶ ಪೂಜಾರ ಅವರು ತಮ್ಮ ತಾಯಿ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲು ಮನವಿ ಮಾಡಿದ್ದರು. ಈ ಸಂಬಂಧ ಎಎಸ್‌ಐ ಇಂಗಳಹಳ್ಳಿ ₹13 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರು ಆಧಾರವಾಗಿ ಲೋಕಾಯುಕ್ತ ಪೊಲೀಸರು ಬಲೆ ಬೀಸಿ, ಬುಧವಾರ ಪೊಲೀಸ್ ಠಾಣೆಯಲ್ಲೇ ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ಎಎಸ್‌ಐಯನ್ನು ಬಂಧಿಸಿದರು.
ಪ್ರಕರಣದ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.