🔴SPECIAL ARTICLE : “ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ಗಲ್ಲುಗಂಬಕ್ಕೇರಿದ : ಮಹಾನ್‌ ಕ್ರಾಂತಿಕಾರಿಗಳಾದ ಭಗತ್‌ ಸಿಂಗ್‌, ರಾಜಗುರು ಮತ್ತು ಸುಖದೇವ ಅವರ 95ನೇ ಹುತಾತ್ಮ ದಿನ ಇಂದು!

By admin

SPECIAL ARTICLE : “ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ಗಲ್ಲುಗಂಬಕ್ಕೇರಿದ : ಮಹಾನ್‌ ಕ್ರಾಂತಿಕಾರಿಗಳಾದ ಭಗತ್‌ ಸಿಂಗ್‌, ರಾಜಗುರು ಮತ್ತು ಸುಖದೇವ ಅವರ 95ನೇ ಹುತಾತ್ಮ ದಿನ ಇಂದು!

✍️ ವಿಶೇಷ ಬರಹ ಭೀಮಾಶಂಕರ ಪಾಣೇಗಾಂವ

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಾರ್ಚ್ 23 ಅಜರಾಮರ ದಿನವಾಗಿದೆ. ಇದೇ ದಿನ ದೇಶಭಕ್ತಿಯ ಪ್ರತೀಕಗಳಾದ ಭಗತ್ ಸಿಂಗ್, ಸುಖದೇವ ಥಾಪರ್ ಮತ್ತು ಶಿವರಾಮ್ ರಾಜಗುರು ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿ ಅಮರರಾದರು. ಇವರ ಬಲಿದಾನವು ಕೇವಲ ಇತಿಹಾಸದ ಒಂದು ಘಟನೆಯಲ್ಲ; ಅದು ಇಂದಿಗೂ ಯುವಕರ ಮನಸ್ಸಿನಲ್ಲಿ ಜ್ವಾಲೆಯಂತೆ ಹೊತ್ತಿ ಉರಿಯುತ್ತಿರುವ ಸ್ಫೂರ್ತಿಯಾಗಿದೆ.

1907ರ ಸೆಪ್ಟೆಂಬರ್ 28ರಂದು ಪಂಜಾಬಿನ ಬಂಗಾ ಗ್ರಾಮದಲ್ಲಿ ಜನಿಸಿದ ಭಗತ್ ಸಿಂಗ್ ಬಾಲ್ಯದಲ್ಲಿಯೇ ದೇಶಭಕ್ತಿಯ ಬೀಜವನ್ನು ಮನದಲ್ಲಿ ಬೆಳೆಸಿಕೊಂಡಿದ್ದರು. 1919ರ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡವು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿತು. ಆ ಘಟನೆ ಅವರ ಜೀವನದ ದಿಕ್ಕನ್ನೇ ಬದಲಾಯಿಸಿ, ಕ್ರಾಂತಿಯ ಮಾರ್ಗದಲ್ಲಿ ಸಾಗುವಂತೆ ಮಾಡಿತು.

ಬ್ರಿಟಿಷರ ದಮನಕಾರಿ ಆಡಳಿತ, ಕಾರ್ಮಿಕರ ಮೇಲಿನ ಶೋಷಣೆ ಹಾಗೂ ಜನರ ಹಕ್ಕುಗಳ ಹರಣ ದೇಶದಾದ್ಯಂತ ಆಕ್ರೋಶವನ್ನು ಹುಟ್ಟಿಸಿತು. ಈ ಹಿನ್ನೆಲೆದಲ್ಲಿ ಭಗತ್ ಸಿಂಗ್, ಸುಖದೇವ ಮತ್ತು ರಾಜಗುರು ಸಂಧಾನತೀತ ಕ್ರಾಂತಿಕಾರಿಗಳಾಗಿ ಹೊರಹೊಮ್ಮಿದರು. ಇವರೊಂದಿಗೆ ಚಂದ್ರಶೇಖರ ಆಜಾದ್ ಸೇರಿದಂತೆ ಅನೇಕ ಯುವಕರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿದರು.

“ಇಂಕ್ವಿಲಾಬ್ ಜಿಂದಾಬಾದ್” ಎಂಬ ಘೋಷಣೆ ಮೂಲಕ ಭಗತ್ ಸಿಂಗ್ ಯುವಕರಲ್ಲಿ ಜಾಗೃತಿ ಮೂಡಿಸಿದರು. 1929ರಲ್ಲಿ ದೆಹಲಿಯ ಕೇಂದ್ರ ವಿಧಾನಸಭೆಯಲ್ಲಿ ಅವರು ಮತ್ತು ಬಟುಕೇಶ್ವರ ದತ್ ಬಾಂಬ್ ಎಸೆದು, ಯಾರಿಗೂ ಹಾನಿಯಾಗದಂತೆ ಬ್ರಿಟಿಷರ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಇದು ಹಿಂಸಾತ್ಮಕ ಕೃತ್ಯಕ್ಕಿಂತಲೂ ಜನರಲ್ಲಿ ಜಾಗೃತಿ ಮೂಡಿಸುವ ಸಂಕೇತಾತ್ಮಕ ಹೋರಾಟವಾಗಿತ್ತು.

ಬಂಧನಕ್ಕೊಳಗಾದ ನಂತರವೂ ಅವರು ತಮ್ಮ ತತ್ವಗಳನ್ನು ಬಿಟ್ಟುಬಿಡಲಿಲ್ಲ. ನ್ಯಾಯಾಲಯದಲ್ಲಿಯೇ ತಮ್ಮ ಸಮಾಜವಾದಿ ಚಿಂತನೆಗಳನ್ನು ಸ್ಪಷ್ಟವಾಗಿ ಮಂಡಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು. ಅವರ ವಿಚಾರಣೆ ದೇಶದಾದ್ಯಂತ ಚರ್ಚೆಗೆ ಕಾರಣವಾಗಿ, ಜನರಲ್ಲಿ ಭಾರೀ ಬೆಂಬಲವನ್ನು ತಂದಿತು. ನಂತರ ನಡೆದ ನ್ಯಾಯಾಂಗ ವಿಚಾರಣೆಯಲ್ಲಿ ಭಗತ್ ಸಿಂಗ್, ಸುಖದೇವ ಮತ್ತು ರಾಜಗುರು ಅವರಿಗೆ ಮರಣದಂಡನೆ ವಿಧಿಸಲಾಯಿತು. ದೇಶದಾದ್ಯಂತ ವಿರೋಧ ವ್ಯಕ್ತವಾದರೂ, ಬ್ರಿಟಿಷ್ ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ.

1931ರ ಮಾರ್ಚ್ 23ರಂದು ಲಾಹೋರ್ ಕಾರಾಗೃಹದಲ್ಲಿ ಈ ಮೂವರು ನಗುನಗುತ್ತಲೇ ಗಲ್ಲುಗಂಬವನ್ನು ಅಪ್ಪಿಕೊಂಡು ಹುತಾತ್ಮರಾದರು. ಅವರ ಧೈರ್ಯ ಮತ್ತು ಅಚಲ ಮನೋಭಾವವು ಇತಿಹಾಸದಲ್ಲಿ ಅಚ್ಚಳಿಯದ ಗುರುತು ಬಿಟ್ಟಿದೆ.
ಗಲ್ಲಿಗೇರಿಸಿದ ನಂತರ ಅವರ ದೇಹಗಳನ್ನು ಕುಟುಂಬಕ್ಕೆ ಒಪ್ಪಿಸದೇ ಗುಪ್ತವಾಗಿ ದಹನ ಮಾಡಿದ ಕ್ರಮ ಜನರಲ್ಲಿ ಭಾರೀ ಆಕ್ರೋಶವನ್ನು ಉಂಟುಮಾಡಿತು. ಜನರು ಅವರ ಅವಶೇಷಗಳನ್ನು ಸಂಗ್ರಹಿಸಿ ಗೌರವಪೂರ್ವಕ ಅಂತ್ಯಕ್ರಿಯೆ ನೆರವೇರಿಸಿದರು. ಈ ಘಟನೆ ದೇಶಭಕ್ತಿಯ ಅಲೆ ಎಬ್ಬಿಸಿತು.

ಭಗತ್ ಸಿಂಗ್ ಅವರ ಹೋರಾಟ ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲ; ಅದು ಸಮಾನತೆ, ನ್ಯಾಯ ಮತ್ತು ಶೋಷಣೆಯಿಲ್ಲದ ಸಮಾಜ ನಿರ್ಮಾಣಕ್ಕಾಗಿ ಆಗಿತ್ತು. ಅವರು ಕನಸು ಕಂಡ ಭಾರತವು ಸಮಾನತೆಯ, ನ್ಯಾಯಸಮ್ಮತ ಮತ್ತು ಮಾನವೀಯ ಮೌಲ್ಯಗಳ ಮೇಲೆ ನಿಂತಿರಬೇಕೆಂಬುದು ಅವರ ಆಶಯವಾಗಿತ್ತು.

ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರೂ, ಸಮಾಜದಲ್ಲಿ ಅಸಮಾನತೆ, ಭ್ರಷ್ಟಾಚಾರ ಮತ್ತು ಅನ್ಯಾಯ ಇನ್ನೂ ಕಂಡುಬರುತ್ತಿವೆ. ಇಂತಹ ಸಂದರ್ಭದಲ್ಲಿ ಈ ಮಹಾನ್ ಕ್ರಾಂತಿಕಾರಿಗಳ ಆದರ್ಶಗಳು ಇನ್ನಷ್ಟು ಪ್ರಸ್ತುತವಾಗುತ್ತವೆ. ಯುವಕರು ಅವರ ತ್ಯಾಗವನ್ನು ಕೇವಲ ಸ್ಮರಣೆಗೆ ಸೀಮಿತಗೊಳಿಸದೆ, ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು, ಸತ್ಯದ ಪರ ನಿಲ್ಲುವುದು ಮತ್ತು ಸಮಾಜದಲ್ಲಿ ಬದಲಾವಣೆ ತರುವುದು – ಇದೇ ಅವರಿಗೆ ಸಲ್ಲುವ ನಿಜವಾದ ಗೌರವ.

ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರು ಕೇವಲ ಇತಿಹಾಸದ ಪಾತ್ರಗಳಲ್ಲ; ಅವರು ಕ್ರಾಂತಿಯ ಜೀವಂತ ಸ್ಫೂರ್ತಿಗಳು. ಅವರ ತ್ಯಾಗವು ಮುಂದಿನ ಪೀಳಿಗೆಗಳನ್ನು ಸದಾ ಪ್ರೇರೇಪಿಸುತ್ತಲೇ ಇರುತ್ತದೆ.

✍️  ಭೀಮಾಶಂಕರ್ ಪಾಣೇಗಾಂವ,  ಹವ್ಯಾಸಿ ಬರಹಗಾರರು,ಕಲಬುರಗಿ.