🔴  LOCAL NEWS : “ಶಹಾಪುರ| ಮಹಿಳಾ ದಿನಾಚರಣೆ ;ಸೃಷ್ಟಿಯ ಚಲನೆಗೆ ಹೆಣ್ಣು-ಗಂಡು ಎರಡೂ ಅವಶ್ಯಕ : ರಾಜಯೋಗಿನಿ ಬಿ.ಕೆ. ಉಷಾ ಅಭಿಮತ”

By admin

  LOCAL NEWS : “ಶಹಾಪುರ| ಮಹಿಳಾ ದಿನಾಚರಣೆ ;ಸೃಷ್ಟಿಯ ಚಲನೆಗೆ ಹೆಣ್ಣು-ಗಂಡು ಎರಡೂ ಅವಶ್ಯಕ : ರಾಜಯೋಗಿನಿ ಬಿ.ಕೆ. ಉಷಾ ಅಭಿಮತ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಶಹಾಪುರ:

ತಾಲೂಕಿನ ಭೀಮರಾಯನ ಗುಡಿಯಲ್ಲಿ ಸ್ನೇಹ ಸೇತು ಲೇಡೀಸ್ ಕ್ಲಬ್ ವತಿಯಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜಯೋಗಿನಿ ಬಿ.ಕೆ. ಉಷಾ, ಹೆಣ್ಣಿನಲ್ಲಿ ಅಪಾರವಾದ ಶಕ್ತಿ, ಸಾಮರ್ಥ್ಯ ಹಾಗೂ ಸಹನಶೀಲತೆ ಅಡಕವಾಗಿದ್ದು, ಅವಳನ್ನು ಪ್ರಕೃತಿ ಮತ್ತು ಭೂಮಿಗೆ ಹೋಲಿಸಲಾಗುತ್ತದೆ ಎಂದು ಹೇಳಿದರು. “ತೊಟ್ಟಿಲು ತೂಗುವ ಕೈ ಜಗವನ್ನೇ ಆಳುತ್ತದೆ” ಎಂಬ ಮಾತು ಅಕ್ಷರಶಃ ಸತ್ಯವಾಗಿದ್ದು, ಸೃಷ್ಟಿಯ ಚಲನೆಗೆ ಹೆಣ್ಣು-ಗಂಡು ಎರಡೂ ಅವಶ್ಯಕ ಹಾಗೂ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ವೈದ್ಯರಾದ ಇಂದಿರಾ ಉಪ್ಪಿನ್, ಹೆಣ್ಣು ಅಬಲೆಯಲ್ಲ, ಅವಳು ಸಬಲೆ ಎಂದು ಹೇಳಿ, ಹೆಣ್ಣು ಮಕ್ಕಳು ಶಿಕ್ಷಣದ ಮೂಲಕ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು. ಕುಟುಂಬದ ಮೇಲೆ ದುಷ್ಪರಿಣಾಮ ಬೀರುವ ಧಾರಾವಾಹಿಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಉನ್ನತ ಹುದ್ದೆಗೇರಿದ ಮಹಿಳಾ ಸರ್ಕಾರಿ ನೌಕರರಾದ  ಸುಧಾ ಹಿರೇಮಠ, ಕುಮಾರಿ ವಿಜಯಲಕ್ಷ್ಮಿ ನಾಯಕ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಕಾವೇರಿ ಪಾಟೀಲ್ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಮಲ್ಲಣ್ಣ ದೇಸಾಯಿ, ಸಬ್ ಇನ್ಸ್ಪೆಕ್ಟರ್ ದೇವೇಂದ್ರರೆಡ್ಡಿ ನವಲಿ, ನ್ಯಾಯವಾದಿ ವಿದ್ಯಾಶ್ರೀ ಬಿರಾದರ್, ತಾಂತ್ರಿಕ ಸಹಾಯಕ ಸತ್ಯನಾರಾಯಣರಾವ್,  ಶಕುಂತಲಾ ಹಡಗಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

 ಕಾವೇರಿ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ನಂದಾ ಕ್ಯಾತನ್ನವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ವೆಂಕಮ್ಮ ಪಾಟೀಲ್, ಮಧು ಪಸ್ಪುರ್, ಶಿಲ್ಪ ಅಂಗಡಿ, ಇಂದಿರಾ ಸಿಂಗಾರೆ, ಪುಷ್ಪ ಪಾಟೀಲ್, ಶಿವಕಾಂತಮ್ಮ ಹಾಗೂ ಪಂಕಜಾ ಭೋಲೆ ಉಪಸ್ಥಿತರಿದ್ದರು