ಖ್ಯಾತ ಲೇಖಕರು: ಮುಕ್ಕಣ್ಣ ಕರಿಗಾರ
ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ಜುಲೈ 24 ರಂದು ಹಲವು ಮಸೂದೆಗಳು ಅಂಗೀಕಾರಗೊಂಡಿದ್ದು ಅವುಗಳಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಮಸೂದೆಯೊಂದು ಅಂಗೀಕಾರಗೊಂಡಿರುವುದು ಮಹತ್ವದ ಸಂಗತಿ.ಪ್ರವಾಸೋದ್ಯಮ ಸಚಿವರಾಗಿರುವ ಎಚ್ ಕೆ ಪಾಟೀಲರ ಆಸಕ್ತಿ,ಇತಿಹಾಸಪ್ರಜ್ಞೆ ಮತ್ತು ದೂರದರ್ಶಿತ್ವದಿಂದ ಇಂತಹದ್ದೊಂದು ಐತಿಹಾಸಿಕ ಮಹತ್ವದ ಮಸೂದೆಯು ಶಾಸನವಾಗಿದೆ.’ ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ತ್ವ ಸ್ಥಳಗಳ ಮತ್ತು ಸಂರಕ್ಷಿತ ಸ್ಥಳಗಳ ಮಸೂದೆ 2024′ ಮಸೂದೆಯು ನಿನ್ನೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ.ಸಾರ್ವಜನಿಕರ ಸಹಭಾಗಿತ್ವದಲ್ಲಿ ಪ್ರಾಚೀನ ಮತ್ತು ಐತಿಹಾಸಿಕ ಸ್ಥಳಗಳು,ಸ್ಮಾರಕಗಳನ್ನು ರಕ್ಷಿಸುವ ಪ್ರಯತ್ನಕ್ಕೆ ಈಗ ಶಾಸನಾತ್ಮಕ ಬಲ ಬಂದಿದೆ.ಸಂಸದೀಯ ವ್ಯವಹಾರಗಳ ಖಾತೆಯ ಜೊತೆಗೆ ಪ್ರವಾಸೋದ್ಯಮ ಸಚಿವ ಖಾತೆಯನ್ನು ಹೊಂದಿರುವ ಮುತ್ಸದ್ದಿ ರಾಜಕಾರಣಿ ಎಚ್ ಕೆ ಪಾಟೀಲರು ಅಧಿವೇಶನಕ್ಕೆ ಪೂರ್ವದಲ್ಲಿಯೇ ರಾಜ್ಯದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ,ಸ್ಥಳೀಯರುಗಳೊಂದಿಗೆ ಚರ್ಚಿಸಿ,ಸಂಘ ಸಂಸ್ಥೆಗಳು,ಸ್ವಯಂಸೇವಾ ಸಂಸ್ಥೆಗಳು ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆದು ನಿರ್ವಹಿಸುವಂತೆ ಅವರುಗಳ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದರು.ತಮ್ಮ ಇತಿಹಾಸಪ್ರಜ್ಞೆ ಮತ್ತು ಪರಂಪರೆಯಕಸುವಿನ ಕಾಳಜಿಗೆ ಶಾಸನದ ಬಲತುಂಬುವ ಮೂಲಕ ಎಚ್ ಕೆ ಪಾಟೀಲರು ಅಭಿನಂದನಾರ್ಹ ಕಾರ್ಯ ಮಾಡಿದ್ದಾರೆ.
ಈ ಕಾಯ್ದೆಯ ಮಹತ್ವ ಬಹಳ ಜನರಿಗೆ ಅರ್ಥವಾಗಲಿಕ್ಕಿಲ್ಲ.ಈ ಕಾಯ್ದೆಯಿಂದ ಜನರಿಗೆ ನೇರ ಪ್ರಯೋಜನವಿಲ್ಲ,ಸರಕಾರಕ್ಕೆ ಆದಾಯವೂ ಬರುವುದಿಲ್ಲ.ಆದರೆ ನಮ್ಮ ಪರಂಪರೆಯನ್ನು ಜೀವಂತವಾಗಿಡುವ,ನಮ್ಮ ಪೂರ್ವಿಕರ ಕನಸುಗಳಿಗೆ ಜೀವತುಂಬುವ ಅಮೃತಸ್ಪರ್ಶದ ಕಾರ್ಯವನ್ನು ಮಾಡಿದ್ದಾರೆ ಎಚ್ ಕೆ ಪಾಟೀಲರು.ಮನುಷ್ಯರ ಭಾವನೆಗಳನ್ನೇ ಅರ್ಥಮಾಡಿಕೊಳ್ಳದ ‘ ನಾಗರಿಕ ಪ್ರಪಂಚ’ ದಲ್ಲಿ ಎಚ್ ಕೆ ಪಾಟೀಲರು ಕಲ್ಲುಗಳ ಹೃದಯಬಡಿತವನ್ನು ಅರ್ಥಮಾಡಿಕೊಂಡು ಶಿಲೆಗಳಲ್ಲಡಗಿದ ಪರಮಾತ್ಮನ ಸತ್ಯ ಮತ್ತು ಸೊಬಗನ್ನು ಸಂರಕ್ಷಿಸುವ ಸಾರ್ಥಕ ಕಾರ್ಯಮಾಡಿದ್ದಾರೆ.
ಐತಿಹಾಸಿಕ ಸ್ಥಳಗಳು,ಸ್ಮಾರಕಗಳ ರಕ್ಷಣೆಗಾಗಿ ಕಾಯ್ದೆಯಲ್ಲಿ ‘ ಸ್ಮಾರಕಮಿತ್ರರು’ ಗಳ ಪ್ರಸ್ತಾವನೆ ಮಾಡಿದ್ದು ಸ್ಮಾರಕಗಳ ಸಂರಕ್ಷಣೆಗೆ ನೆರವಾಗಲಿದೆ.ಆಸಕ್ತಿಯುಳ್ಳ ವ್ಯಕ್ತಿಗಳು,ಕಂಪನಿಗಳು,ಲಿಮಿಟೆಡ್ ಕಂಪನಿಗಳು,ಸಹಕಾರ ಸಂಘಗಳು,ಸಾಮಾಜಿಕ ಮತ್ತು ಸರ್ಕಾರಿ ಸಂಸ್ಥೆಗಳು,ಟ್ರಸ್ಟ್ ಗಳು ಅಥವಾ ಸರ್ಕಾರೇತರ ಸಂಸ್ಥೆಗಳು ‘ ಸ್ಮಾರಕಮಿತ್ರರು’ ಗಳಾಗಿ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಮುಂದೆಬರಬಹುದಾಗಿದೆ.ಕೇಂದ್ರಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಮಹತ್ವದ ಸ್ಮಾರಕಗಳಿಗೆ ಬಿಗಿಯಾದ ಸಂರಕ್ಷಣಾ ಕ್ರಮಗಳಿರುವುದರಿಂದ ಅವುಗಳ ತಂಟೆಗೆ ಜನರು ಹೋಗುವುದಿಲ್ಲ.ಆದರೆ ರಾಜ್ಯಪುರಾತತ್ವ ಇಲಾಖೆಯ ಆಧೀನದಲ್ಲಿರುವ ರಾಜ್ಯಮಹತ್ವದ ಹತ್ತಾರು ಸಾವಿರ ಐತಿಹಾಸಿಕ ಸ್ಮಾರಕಗಳು ಇಲಾಖೆಯ ನಿರ್ಲಕ್ಷ್ಯ ಮತ್ತು ಗ್ರಾಮೀಣ ಜನರ ಅಸಡ್ಡೆ,ಕೆಲವರ ಸ್ವಾರ್ಥಕ್ಕೆ ಬಲಿಯಾಗಿ ನಾಶವಾಗುತ್ತಿವೆ,ವಿರೂಪಗೊಂಡಿವೆ.ಪುರಾತತ್ವ ಇಲಾಖೆಗೆ ಸೇರಿದ ದೇವಸ್ಥಾನಗಳು,ಮಠ ಮಂದಿರಗಳನ್ನು ಖಾಸಗಿ ವ್ಯಕ್ತಿಗಳು ಆಕ್ರಮಿಸಿದ್ದಾರೆ.ಇತಿಹಾಸ ಪ್ರಜ್ಞೆ ಇಲ್ಲದ ಗ್ರಾಮೀಣ ಜನತೆ ಕೋಟೆ ಕೊತ್ತಲಗಳನ್ನು ಕೆಡವಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ.ಹಳೆಯ ದೇವಸ್ಥಾನಗಳನ್ನು ಕೆಲವರು ತಮ್ಮ ವಾಸದ ಮನೆಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.ಮತ್ತೆ ಕೆಲವರು ಹಳೆಯ ದೇವಸ್ಥಾನಗಳಲ್ಲಿದ್ದ ಮೂರ್ತಿ ವಿಗ್ರಹಗಳನ್ನು ರಾಜಾರೋಷವಾಗಿ ಎತ್ತಿಕೊಂಡುಹೋಗಿ ತಮ್ಮ ಮಠ ಮಂದಿರಗಳಲ್ಲಿ ಅಲಂಕಾರಿಕವಸ್ತುಗಳನ್ನಾಗಿ ಬಳಸುತ್ತಿದ್ದಾರೆ.ಇಂತಹ ದುಷ್ಕೃತ್ಯಗಳಿಂದ ಐತಿಹಾಸಿಕ ಮಹತ್ವದ ಸ್ಮಾರಕಗಳನ್ನು ಕಾಪಾಡುವಲ್ಲಿ ಈ ಶಾಸನವು ಮಹತ್ವದ ಪಾತ್ರವಹಿಸಲಿದೆ.
ಶಾಸನವನ್ನು ಜಾರಿಗೊಳಿಸುವ ಜೊತೆಗೆ ಪ್ರವಾಸೋದ್ಯಮ ಇಲಾಖೆಯು ತನ್ನ ಸಿಬ್ಬಂದಿಗಳು,ಪುರಾತತ್ವ ಇಲಾಖೆಯ ಸಿಬ್ಬಂದಿ,ಮುಜರಾಯಿ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ,ಪುರಸಭೆ,ಪಟ್ಟಣಪಂಚಾಯತಿ ಮತ್ತು ನಗರಸಭೆಗಳ ಸಿಬ್ಬಂದಿಯವರನ್ನು ಬಳಸಿಕೊಂಡು ಸ್ಮಾರಕಗಳ ಸರ್ವೆ ಮಾಡಿಸಬೇಕು.ಎಷ್ಟು ಸ್ಮಾರಕಗಳಿವೆ,ಅವು ಯಾವ ಸ್ಥಳದಲ್ಲಿ,ಯಾವ ಸ್ಥಿತಿಯಲ್ಲಿವೆ ಎನ್ನುವ ನಿಖರ ಮಾಹಿತಿಯನ್ನು ಸಂಗ್ರಹಿಸಬೇಕಲ್ಲದೆ ಗ್ರಾಮಪಂಚಾಯತಿ ಮತ್ತು ನಗರಸ್ಥಳೀಯ ಸಂಸ್ಥೆಗಳ ಆಸ್ತಿ ರಜಿಸ್ಟರ್ ನಲ್ಲಿ ಅವುಗಳನ್ನು ದಾಖಲಿಸಬೇಕು.ನಗರಾಡಳಿತ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತಿಗಳಿಗೆ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ಜವಾಬ್ದಾರಿ ನೀಡಬೇಕು.ಐತಿಹಾಸಿಕ ಸ್ಥಳಗಳು,ಸ್ಮಾರಕಗಳ ಬಳಿ,ಸಮೀಪ ಯಾವುದೇ ವಾಸದ ಮನೆಗಳು,ವಾಣಿಜ್ಯೋದ್ದೇಶ ನಿರ್ಮಾಣದ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವುದನ್ನು ನಿರ್ಬಂಧಿಸಬೇಕು,ಒತ್ತುವರಿಗಳನ್ನು ತೆರವುಗೊಳಿಸಬೇಕು.ಐತಿಹಾಸಿಕ ಮಹತ್ವದ ದೇವಸ್ಥಾನಗಳ ಬಳಿ ಇರುವ ಶಿಲಾಶಾಸನಗಳನ್ನು ಸಂರಕ್ಷಿಸಬೇಕು.ದೇವಸ್ಥಾನಗಳ ಮೂರ್ತಿಗಳು,ಶಾಸನಗಳು ನಿಧಿಗಳ್ಳರ ಕ್ರೂರಕಣ್ಣುಗಳಿಗೆ ಬಲಿಯಾಗದಂತೆ ಸ್ಥಳಿಯಾಡಳಿತ ಸಂಸ್ಥೆಗಳು ನಿಗಾವಹಿಸಬೇಕು.ಶಾಸನಗಳ ಬಳಿ ಅವುಗಳ ಕನ್ನಡ ಅನುವಾದದ ಫ್ಲೆಕ್ಸ್ ಗಳನ್ನು ಅಳವಡಿಸಬೇಕು.ಇದರಿಂದ ಆಸಕ್ತರಿಗೆ ಶಾಸನಗಳ ವಿವರ ತಿಳಿದುಕೊಳ್ಳಲು ಅನುಕೂಲವಾಗುತ್ತದೆ.
ಕಾಯ್ದೆಯಲ್ಲಿ ಪ್ರಸ್ತಾಪಿಸಿದ ‘ ಸ್ಮಾರಕಮಿತ್ರರು’ ಗಳು ಕುಗ್ರಾಮಗಳು,ದೂರದ ಸ್ಥಳಗಳಲ್ಲಿ ಆಸಕ್ತಿ ತೋರಿಸುವುದಿಲ್ಲವಾದ್ದರಿಂದ ಸ್ಮಾರಕಮಿತ್ರರುಗಳ ಜೊತೆಗೆ ‘ ಸ್ಮಾರಕ ರಕ್ಷಕರು’ ಇಲ್ಲವೆ ‘ ಸ್ಮಾರಕ ಕಾವಲುಗಾರರು’ ಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ.ಗ್ರಾಮ ಪಂಚಾಯತಿ ಅಥವಾ ನಗರಾಡಳಿತ ಸಂಸ್ಥೆಗಳು ಸಾರ್ವಜನಿಕರ ನೆರವಿನೊಂದಿಗೆ,ಕಾರ್ಪೋರೇಟ್ ಸಂಸ್ಥೆಗಳ ನೆರವಿನೊಂದಿಗೆ ಇಲ್ಲವೆ ಸ್ವಂತ ಸಂಪನ್ಮೂಲಗಳಿಂದ ತಮ್ಮ ವ್ಯಾಪ್ತಿಯಲ್ಲಿರುವ ಸ್ಮಾರಕಗಳ ಸಂಖ್ಯೆಗನುಗುಣವಾಗಿ ಒಬ್ಬರೋ ಇಬ್ಬರೋ ‘ಸ್ಮಾರಕ ಸಂರಕ್ಷಕರು’ ಅಥವಾ ‘ ಸ್ಮಾರಕ ಕಾವಲುಗಾರರು’ ಗಳನ್ನು ಮಾಸಿಕ ಸಂಭಾವನೆಯ ಆಧಾರದಲ್ಲಿ ನೇಮಿಸಿಕೊಂಡು ಅವರು ಸ್ಮಾರಕಗಳ ಕಾವಲು ಕಾಯುವಂತೆ ನೋಡಿಕೊಳ್ಳಬೇಕು.ಇಂತಹ ಕ್ರಮಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ಆರ್ಥಿಕ ಲಾಭ ಇಲ್ಲದೆ ಇರಬಹುದು ಆದರೆ ಮುಂಬರುವ ಪೀಳಿಗೆಗೆ ಸ್ಥಳದ ಐತಿಹಾಸಿಕ ಮಹತ್ವವನ್ನು ತಿಳಿಸಿಕೊಡುವ ಮಹತ್ವದ ಕಾರ್ಯವಾಗುತ್ತದೆ.

