ಸಂವಿಧಾನವನ್ನು ಮುಳುಗಿಸುವ ಯತ್ನ, ರಕ್ಷಣೆಗೆ ಶೋಷಿತ ವರ್ಗಗಳು ಪಣತೊಡಲಿ: ಸಚಿವ ಡಾ. ಮಹದೇವಪ್ಪ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ

ಸಂವಿಧಾನ ಜಾರಿ ಮಾಡುವ ಜಾಗದಲ್ಲಿ ಅದನ್ನು ವಿರೋಧಿಸುವ ಜನರು ಕುಳಿತಿದ್ದಾರೆ. ಸಂವಿಧಾನ ಮುಳುಗಿಸುವ ಯತ್ನ ನಡೆದಿದೆ. ಅದರ ರಕ್ಷಣೆಗೆ ಶೋಷಿತ ವರ್ಗಗಳು ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾಕ್ಟರ್ ಹೆಚ್ ಸಿ ಮಹಾದೇವಪ್ಪ ಹೇಳಿದರು.
ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಹಿಂದುಳಿದ ವರ್ಗಗಳ ಮಹಾವಕ್ಕೂಟ ಶೋಷಿತ ವರ್ಗಗಳ ಮಹಾವಕ್ಕೂಟ ಸಮ ಸಮಾಜ ಚಿಂತನ ವೇದಿಕೆ ಕರ್ನಾಟಕ ರಾಜ್ಯ ಸರಕಾರಿ ಅರೆ ಸರಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಕಲ್ಯಾಣ ಸಂಘದ ಸಹಯೋಗದಲ್ಲಿ ನಡೆದ ಶೋಷಿತ ವರ್ಗಗಳ ಐಕ್ಯತಾ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜಾತಿಯ ಕಾರಣದಿಂದ ಉಂಟಾಗಿರುವ ಸಮಾಜದಲ್ಲಿ ರಾಜಕೀಯ ಅಸಮಾನತೆ, ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆ ಉಂಟಾಗಿದೆ. ಈ ಅಸಮಾನತೆಯನ್ನು ಹೋಗಲಾಡಿಸಲು ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಸಂವಿಧಾನದಿಂದ ಮಾತ್ರ ಸಾಧ್ಯ.ಸಾಮಾಜಿಕ ಪ್ರಜಾಪ್ರಭುತ್ವವು ರಾಜಕೀಯ ಮತ್ತು ಸಮಾನತೆಯ ತಳಹದಿಯ ಮೇಲೆ ನಿಂತಾಗ ಮಾತ್ರ ಸಂವಿಧಾನದ ಆಶಯ ಸಾರ್ಥಕವಾಗುತ್ತದೆ. ಆದರೆ ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಇನ್ನೂ ಅಸಮಾನತೆ ಹೋಗಿಲ್ಲ. ಈ ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಇದೇ ಸಂವಿಧಾನವನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದು ಅಧಿಕಾರ ಕೈಗೆ ತೆಗೆದುಕೊಂಡಿದ್ದಾರೆ. ಅವರಿಂದಲೇ ಸಂವಿಧಾನಕ್ಕೆ ಗಂಡಾಂತರ ಎದುರಾಗಿದೆ. ಉಳ್ಳವರ ಕೈಗೆ ರಾಜಕೀಯ ಅಧಿಕಾರವನ್ನು ನೀಡುವುದರಿಂದ ಬಡವರು, ಜಾತಿ ವ್ಯವಸ್ಥೆಗೆ ಬಲಿಯಾದ ಶೋಷಿತರು ಇನ್ನಷ್ಟು ಅನ್ಯಾಯ ಶೋಷಣೆಗೊಳಗಾಗುತ್ತಾರೆ. ಇದನ್ನು ತಪ್ಪಿಸಬೇಕಾದರೆ ಮೊದಲು ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆದುಕೊಂಡು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸಬೇಕು ಎನ್ನುವುದು ಅಂಬೇಡ್ಕರ್  ಅವರ ಸ್ಪಷ್ಟ ನಿಲುವಾಗಿತ್ತು. ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯವನ್ನು ನಿವಾರಣೆ ಮಾಡುವುದು ನಮ್ಮಕರ್ತವ್ಯವಾಗಿದೆ. ಅದರ ರಕ್ಷಣೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ. ಯಾರು ಸಂವಿಧಾನದ ಮೇಲೆ ನಂಬಿಕೆಯಿಟ್ಟಿದ್ದಾರೋ ಅವರ ಕೈಗೆ ಅಧಿಕಾರ ಸಿಕ್ಕಿದರೆ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯ ಎಂದರು.

ಶೋಷಿತ ವರ್ಗಗಳು ಒಂದಾಗುವ ಕಾಲ ಕೂಡಿ ಬಂದಿದೆ, ಸಚಿವ ಜಾರಕಿಹೋಳಿ

ದೇಶದಲ್ಲಿ ಮನುವಾದಿ ಶಕ್ತಿಗಳು ಒಂದಾಗುತ್ತಿದ್ದಾರೆ. ಆದರೆ ಜಾತ್ಯಾತೀತ ಶಕ್ತಿಗಳು ಹರಿದು ಹಂಚಿಹೋಗುತ್ತಿವೆ. ಜಾತಿಧರ್ಮದ ಹೆಸರಿನಲ್ಲಿ ಸಮಾಜವನ್ನು ಇಬ್ಬಾಗ ಮಾಡಲಾಗುತ್ತಿದೆ. ಸಂವಿಧಾನ ಮತ್ತು ಶೋಷಿತ ಸಮುದಾಯಗಳಿಗೆ ಅಪಾಯ ಎದುರಾದ ಈ ಸಂದರ್ಭದಲ್ಲಿ ಹೊಡೆದು ಹೋದ ಮನಸ್ಸುಗಳು ಒಂದಾಗದಿದ್ದರೆ ಭವಿಷ್ಯವಿಲ್ಲ.
ಸಮಾನತೆ ಮತ್ತು ಸೌಹಾರ್ದತೆಯನ್ನು ಬಯಸುವವರೆಲ್ಲ ಒಂದೇ ವೇದಿಕೆಗೆ ಬಂದು ಸಂವಿಧಾನ ಮತ್ತು ದೇಶವನ್ನು ಉಳಿಸಿಕೊಳ್ಳಬೇಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.
ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ನಡೆದ ಶೋಷಿತ ವರ್ಗಗಳ ಐಕ್ಯತಾ ಸಮಾವೇಶದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು,
ಕೋಮುವಾದ, ಜಾತಿತಾರತಮ್ಯ. ಮೂಢ ನಂಬಿಕೆ, ಕಂದಾಚಾರ ಮೊದಲಾದ ಸಾಮಾಜಿಕ ಪಿಡುಗುಗಳೆಲ್ಲ ಮತ್ತೆ ತಲೆಎತ್ತಲು ಪ್ರಯತ್ನಿಸುತ್ತಿರುವ ಈ ಹೊತ್ತಿನಲ್ಲಿ ಅದರ ವಿರುದ್ಧದ ಹೋರಾಟಕ್ಕೆ ನಮಗಿರುವ ಅಸ್ತ್ರಗಳೆಂದರೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಮೊದಲಾದವರ ತತ್ವ-ಸಿದ್ಧಾಂತಗಳು. ಇದರ ಮೂಲಕವಷ್ಟೇ ಸಂವಿಧಾನದ ಮೂಲ ಆಶಯವಾದ ಸಮಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಈಗಲೇ ಈ ಸ್ಥಿತಿಯನ್ನು ಸರಿಪಡಿಸದೇ ಹೋದರೆ ದೇಶವು ಇನ್ನಷ್ಟು ಅಧೋಗತಿಯತ್ತ ಸಾಗಲಿದೆ. ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಸಂವಿಧಾನ ರಕ್ಷಣೆ ಈ ದೇಶದ ಮೂಲ ನಿವಾಸಿಗಳ ಕೈಯಲ್ಲಿದೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಸಂವಿಧಾನ ಇಲ್ಲಾಂದ್ರೆ ದೇಶ, ರಾಜ್ಯ ಹೇಗಿರುತ್ತೆ ಅಂತ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ದೇಶ ಮುನ್ನಡೆಸಲು ಸಂವಿಧಾನ ಬೇಕೇಬೇಕು. ಬಡವರು, ಸಾಮಾನ್ಯರು, ಜಾತಿ ತಾರತಮ್ಯ ಇಲ್ಲದೇ ಹಕ್ಕು ಚಲಾಯಿಸಬಹುದು. ಶಿಕ್ಷಣ ಪಡೆಯಬಹುದು. ನಮ್ಮ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕೊಟ್ಟಿದೆ. ಎಲ್ಲ ಪ್ರಜೆಗಳಿಗೂ ಇದರಿಂದ ಅನುಕೂಲ ಅಗುತ್ತದೆ.ಇಂಥ ಸಂವಿಧಾನಕ್ಕೆ ಈಗ ಅಪಾಯ ಎದುರಾಗಿದೆ.ಇದನ್ನು ಬುಡಮೇಲು ಮಾಡಿ ಮನುವಾದಿ, ರಾಷ್ಟ್ರ ನಿರ್ಮಿಸುವ ಮಸಲತ್ತು ನಡೆಯುತ್ತಿದೆ.ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುವ ಕುತಂತ್ರ ನಡೆದಿದೆ. ಈಗ ನಮ್ಮೆಲ್ಲರ ಮುಂದೆ ಉಳಿದ ಏಕೈಕ ದಾರಿ ಬಾಬಾಸಾಹೇಬರ ಸಂವಿಧಾನದ ಸಂರಕ್ಷಣೆ. ಈ ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಎಂಬುದನ್ನು ಮರೆಯಬಾರದು ಎಂದರು.

ಬುದ್ಧ, ಬಸವ, ಅಂಬೇಡ್ಕರ್ ರವರ ತತ್ವ-ಸಿದ್ಧಾಂತಗಳ ಅಡಿಯಲ್ಲಿ ಮುನ್ನಡಿಯೋಣ, ಸಚಿವ ದರ್ಶನಾಪುರ್

ಬುದ್ಧ, ಬಸವ, ಅಂಬೇಡ್ಕರ್ ರವರ ತತ್ವ-ಸಿದ್ಧಾಂತಗಳು ಎಲ್ಲ ಕಾಲ್ಲಕ್ಕೂ ಶ್ರೇಷ್ಠ. ಅವರ ತತ್ವ-ಸಿದ್ಧಾಂತಗಳು ಸಾರ್ವಕಾಲಿಕ ಮತ್ತು ಸದಾ ಜನರಿಗೆ ಒಳ್ಳೆಯದನ್ನೇ ಬಯಸುವ ಸಿದ್ಧಾಂತಗಳು. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಶ್ರೇಷ್ಠವಾದ ಸಂವಿಧಾನವನ್ನು ನೀಡಿದ್ದಾರೆ. ಹಲವು ಧರ್ಮ, ಜಾತಿ, ಸಂಸ್ಕೃತಿ, ಭಾಷೆಗಳನ್ನು ಒಗ್ಗೂಡಿಸುವ ಶಕ್ತಿ ಸಂವಿಧಾನಕ್ಕೆ ಮಾತ್ರವಿದೆ. ನಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ ರಕ್ಷಣೆ ನಮ್ಮೆಲ್ಲರ ಗುರಿಯಾಗಬೇಕು. ಅಂದಾಗ ಮಾತ್ರ ಶೋಷಿತ ವರ್ಗಗಳಿಗೆ ನಿಜವಾದ ನ್ಯಾಯ ದೊರಕುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ, ಉರಿಲಿಂಗಪೆದ್ದಿ ಮಹಾ ಸಂಸ್ಥಾನ ಮಠ ಕೊಡ್ಲಾ ಪೀಠಾಧಿಪತಿ ಜ್ಞಾನಪ್ರಕಾಶ ಮಹಾಸ್ವಾಮಿಗಳು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಹಫೀಜ್ ಸೈಯದ್ ಮೊಹಮ್ಮದ್ ಅಲಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ. ಡಿ ಜಿ ಸಾಗರ್, ದಲಿತ ಹಿಂದುಳಿದ ಅಲ್ಪಸಂಖ್ಯಾತರ ಒಕ್ಕೂಟದ ರಾಜ್ಯಾಧ್ಯಕ್ಷ ಕೆಎಂ ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ನಿಖಿತ್ ರಾಜ್ ಮೌರ್ಯ, ಆಯೋಜಕ ಡಾ. ಭೀಮಣ್ಣ ಮೇಟಿ, ತಿಮ್ಮಯ್ಯ ಪುರ್ಲೆ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು.
ವೇದಿಕೆ ಮೇಲೆ, ಗ್ಯಾರಂಟಿ ಯೋಜನೆಗಳ ತಾಲೂಕ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ್, ಶೋಷಿತ ವರ್ಗಗಳ ಜಿಲ್ಲಾಧ್ಯಕ್ಷ ಹನುಮಗೌಡ ಮರ್ಕಲ್, ಮಾಜಿ ವಿಧಾನ ಪರಿಷತ್ ಸದಸ್ಯ ಅಮಿತೆಪ್ಪ ಕಂದಕೂರು, ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪ ಸಲಾದಪುರ, ಹಿರಿಯ ನ್ಯಾಯವಾದಿ ಆರ್ ಚನಬಸು, ಮಲ್ಲಿಕಾರ್ಜುನ್ ಪೂಜಾರಿ, ಶಿವಪುತ್ರ ಜವಳಿ, ಶಿವಕುಮಾರ್ ತಳವಾರ್, ದೇವೇಂದ್ರಪ್ಪ ಗೌಡ ಗೌಡ್ಗೇರಿ, ಹೊನ್ನಪ್ಪ ರಸ್ತಾಪುರ್, ಇಬ್ರಾಹಿಂಸಾಬ್ ಶಿರವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವ ಮಹಾಂತಪ್ಪ ಚಂದಾಪುರ, ಅಯ್ಯಣ್ಣ ಕನ್ನೆಕೋಳೂರು ಸೇರಿದಂತೆ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಮತ್ತು ಮಹಿಳೆಯರು ಭಾಗವಹಿಸಿದ್ದರು.