ಸ್ನೇಹವೆಂಬ ಗಟ್ಟಿ ಬಾಂಧವ್ಯ

By admin

 

ಪ್ರಪಂಚದ ಅತ್ಯಂತ ಮೌಲಿಕವಾದ ಸಂಬಂಧಗಳಲ್ಲಿ ಸ್ನೇಹವು ಒಂದು. ನಂಬಿಕೆ, ಪ್ರೀತಿ, ವಿಶ್ವಾಸದ ಮೂಲಕ ಪರಸ್ಪರರ ನಡುವೆ ನಂಬಿಕೆಯ ತಳಹದಿಯ ಮೇಲೆ ಏರ್ಪಡುವ ವಿಶೇಷ ಸಮ್ಮಿಲನವೆ ಸ್ನೇಹವಾಗಿದೆ. ಮನುಷ್ಯ ಸಂಬಂಧಗಳಲ್ಲೆ ಅತ್ಯಂತ ಶ್ರೇಷ್ಠ ಸಂಬಂಧವಾಗಿ ಗುರುತಿಸಿಕೊಳ್ಳುವ ಸ್ನೇಹ ಅನನ್ಯವಾದ ಜೀವನ ಪ್ರೀತಿಯ ಪ್ರತೀಕವು ಹೌದು. ಸ್ನೇಹದ ಅಭಿವ್ಯಕ್ತಿಗೆ ಎಲ್ಲೆಗಳಿಲ್ಲ, ಗಡಿಗಳಿಲ್ಲ, ಜಾತಿ, ವರ್ಣ, ಉಚ್ಚ ನೀಚವೆಂಬ ಭಾವದ ಸುಳಿವಿಲ್ಲದ ನಿಸ್ಕಲ್ಮಷವಾದ ಭಾವಸಂಗಮದ ಆಗರವಾಗಿ ತೆರೆದುಕೊಳ್ಳುವ ಸ್ನೇಹ ವಿಶ್ವದ ಅತ್ಯಂತ ದುಬಾರಿ ಸಂಬಂಧವಾಗಿದೆ. ಜಗದ ಎಲ್ಲಾ ಸಂಬಂಧಗಳಿಗೆ ಅಳತೆಗೋಲುಗಳಿವೆ ಆದರೆ ಸ್ನೇಹ ಮಾಪನವಿಲ್ಲದ ಮೌಂಟ ಎವರೆಸ್ಟಾಗಿದೆ. ಮನುಷ್ಯನ ಸಂಧಿಗ್ದತೆಯ ಸನ್ನಿವೇಶಕ್ಕೆ ಸಾಂತ್ವಾನದ ತಂಪನೆಯ ಮಳೆಗೆರೆದು ಹೃದಯವನ್ನು ಶಾಂತವಾಗಿಸುವ ಪ್ರಪಂಚದ ಅಮೂಲ್ಯವಾದ ಆಯುರ್ವೇದವಾಗಿದೆ. ಸ್ನೇಹವೆಂಬುದು ಸ್ನೇಹಿತನ ಮೇಲಿರುವ ಅಳಿಸಲಾಗದ ನಂಬಿಕೆ ಗಾಢವಾದ ಭಾವವಾಗಿದೆ. ಜಗತ್ತೇ ಆತನಿಂದ ದೂರಹೋಗುವಾಗ ಒಳಬರುವಾತನೆ ನಿಜವಾದ ಗೆಳೆಯ. ಸ್ನೇಹವೆಂಬುದು ಆಸರೆ ಬೆಂಗಾವಲು, ಸಮರ್ಥನೆ, ಬದುಕಿನ ಅಮೂಲ್ಯ ಜೊತೆಗಾರ. ನಿಜ ನೋವನು ಸಂತೈಸುವ ಮಾತೃ ಹೃದಯಿ ಗೆಳೆಯ, ಬದುಕಿನ ನೋವು ನಲಿವುಗಳನ್ನು ತಕ್ಷಣವೆ ಹಂಚಿಕೊಳ್ಳುಬೇಕೆಂಬ ವಿಶ್ವಾಸಿಕ ಸ್ನೇಹಿತ.

ಸ್ನೇಹಲೋಕವೆಂಬುದು ಆನಂದದ ಸಾಗರ ಈ ಸಾಗರದಲ್ಲಿ ಮಿಂದೆಳುವ ಮನಸ್ಸುಗಳಿಗೆ ಹೃದಯಶ್ರೀಮಂತಿಕೆಯ ಕೊರತೆಯಿರದು. ಜಾತಿ ಧರ್ಮದ ಸಂಕುಚಿತತೆಯ ಭಾವವನ್ನು ಸ್ಫೋಟಿಸುವ ಗುಣ ಹೊಂದಿರುವ ಸ್ನೇಹ,ಪರಸ್ಪರರ ಅಪ್ಪುಗೆಯ ಸೌಹಾರ್ದತೆಯನ್ನು ಕರೆತರುವ ನೆಲೆವಿಡಾಗಿದೆ. ಸ್ನೇಹ ಎನ್ನುವ ಭಾವವು ಪರಿಶುದ್ಧವಾದದ್ದು, ಈ ಭಾವದಲ್ಲಿ ಶ್ರೇಣಿಕರಣವಿಲ್ಲ ಒಳಗೊಳ್ಳುವಿಕೆಯ ಆಯುಷ್ಕಾಂತಿಯ ರಸವಿದೆ.ಒಲವಿನ ಮಹಾಪುರವನ್ನೆ ನಿರ್ಮಿಸಬಲ್ಲ ಬಹುದೊಡ್ಡ ಶಕ್ತಿಯಾಗಿ ಗುರುತಿಸಿಕೊಳ್ಳುವ ಈ ಭಾಂದವ್ಯ ಮನಗಳ ನೆಮ್ಮದಿಯ ಆಶ್ರಯ ತಾಣವು ಹೌದು. ಹೀಗೆ ಬಹು ವಿಧಗಳಲ್ಲಿ ತನ್ನ ಔಚಿತ್ಯವನ್ನು ಸಾರುವ ಸ್ನೇಹವು ಸುಲಭಕ್ಕೆ ದಕ್ಕಿಸಿಕೊಳ್ಳಲಾಗದ ಸಂಬಂಧವು ಅಲ್ಲ. ಹಾಗಾಗಿ ಇಂದಿನ ತಲೆಮಾರು ಸ್ನೇಹವೆಂಬ ಆಳವಾದ ವೃಕ್ಷವನ್ನು ಸಡಿಲಗೊಳಿಸುವ ಸನ್ನಿವೇಶವನ್ನು ಸೃಷ್ಟಿಸಬಾರದು. ಸ್ನೇಹವೆನ್ನುವ ಭಾಂಧವ್ಯಕ್ಕೆ ಮತ್ತಷ್ಟು ಅರ್ಥ ತುಂಬಿ ಈ ಸಂಬಂಧಕ್ಕೆ ಇನ್ನು ಹೆಚ್ಚಿನ ಗೌರವವನ್ನು ತಂದುಕೊಡುವ ವಾತಾವರಣವನ್ನು ನೆಲೆಯೂರಿಸುವ ಅಗತ್ಯತೆಯಿದೆ. ಸ್ನೇಹ ಎಂಬುದು ಅಪ್ಪುಗೆಯ ಆತ್ಮೀಯ ಭಾವವಾಗಿದ್ದು, ಸಂತೈಸುವಿಕೆ ಮಹಾತಾಣವಾಗಿದೆ. ಸ್ನೇಹಕ್ಕೆ ಮಿಗಿಲಾದ ಪರ್ಯಾಯ ಪವಿತ್ರವಾದ ನಂಬುಗೆಯ ಬೆಸುಗೆ ಮತ್ತೊಂದು ಈ ಸೃಷ್ಟಿಯಲ್ಲಿ ಕಾಣಸಿಗದು. ಸ್ನೇಹ ಭಾವ ಪರಸ್ಪರರ ನಡುವೆ ಏರ್ಪಡುವ ಅಮೂಲ್ಯವಾದ ಭಾವಲಹರಿಯಾಗಿದ್ದು ಜಗತ್ತಿನ ಅತ್ಯಂತ ಸುಂದರ ಅನುಭೂತಿಗಳಲ್ಲಿ ತನ್ನನ್ನು ನಿಲ್ಲಿಸಿಕೊಳ್ಳುವ ಅರ್ಹತೆಯನ್ನು ಪಡೆದಿದೆ. ಜಾಗತಿಕರಣ, ನಗರಿಕರಣ, ಆಧುನಿಕರಣದ ಪ್ರಾಭವ್ಯವು ಸ್ನೇಹವೆಂಬ ಬಾಂಧವ್ಯದ ಮೇಲೆ ಮುಸುಕು ಹೊದಿಸುವ ನೆಲೆಯಲ್ಲಿ ಚಾಚಿಕೊಂಡರು, ಪರಂಪರೆಯ ಭವ್ಯತೆ ಅದನ್ನು ಮೀರಿ ಸ್ನೇಹವನ್ನು ಮುನ್ನಡೆಸುವ ಚಾರಿತ್ರಿಕ ತಿಳುವಳಿಕೆಯನ್ನು ಪರಸ್ಪರರ ಮಧ್ಯ ಸೃಜಿಸುತ್ತಿದೆ. ಹಾಗಾಗಿ ಇಂದಿನ ಯುವಮನಸ್ಸುಗಳು ಸ್ನೇಹವನ್ನು ಮೌಲ್ಯದ ನೆಲೆಯಲ್ಲಿ ಪರಿಭಾವಿಸುವ ವಾತಾವರಣವನ್ನು ಸೃಷ್ಟಿಸಿಕೊಳ್ಳುವತ್ತ ದಾಪುಗಾಲು ಹಾಕಬೇಕಾದ ಜರೂರು ಇದೆ. ಈ ದೆಸೆಯಲ್ಲಿ ಯುವ ಸಮುದಾಯ ಸಜ್ಜುಗೊಳ್ಳಲಿ.