KOPPAL NEWS: “ಕೊಪ್ಪಳ |ಗೌರವಧನ ನೀಡದ ಸರ್ಕಾರ : ಜಾತಿ ಗಣತಿ ಸಮೀಕ್ಷೆಯಲ್ಲಿ ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರು ನಿರ್ಧಾರ”

By admin

“ಕೊಪ್ಪಳ |ಗೌರವಧನ ನೀಡದ ಸರ್ಕಾರ : ಜಾತಿ ಗಣತಿ ಸಮೀಕ್ಷೆಯಲ್ಲಿ ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರು ನಿರ್ಧಾರ”

• ಸೆಕ್ಯೂಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ : 

ಕೊಪ್ಪಳ : ವಿವಿಧ ಇಲಾಖೆಗಳಿಂದ ಈಗಾಗಲೇ  ಹಿಂದೆ ನಡೆಸಿದ ಹಲವು ಸಮೀಕ್ಷೆಗಳಿಗೆ ಸೂಕ್ತ ಸಂಭಾವನೆ ದೊರತಿಲ್ಲ. ಹೀಗಾಗಿ ಈ ಜಾತಿ ಗಣತಿ  ಸಮೀಕ್ಷೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂದು ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ  ಜಿಲ್ಲಾ ಸಮಿತಿಯಿಂದ  ಜಿಲ್ಲಾಧಿಕಾರಿ ಸುರೇಶ ಹಿಟ್ನಾಳ್, ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ , ಜಿಲ್ಲಾಆರ್‌ ಸಿಎಚ್‌  ಅಧಿಕಾರಿ ಪ್ರಕಾಶ್ ಅವರ ಮೂಲಕ ಸರ್ಕಾರಕ್ಕೆ ಹಾಗೂ ಅಭಿಯಾನ ನಿರ್ದೇಶಕರಿಗೆ  ಬುಧುವಾರ ಮನವಿ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಸಂಘದ  ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ ಮತ್ತು  ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ಡಿ. ಅವರು ಮಾತನಾಡಿ, ಆಶಾಗಳು ಪ್ರತಿ ಮನೆಗೆ ನಮೂನೆ ನೀಡುವುದರ ಜೊತೆಗೆ, ಸಮೀಕ್ಷೆಯಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ನೀಡಲು ಕುಟುಂಬದ ಸದಸ್ಯರು ಮುಂಚಿತವಾಗಿ ತಯಾರಿರುವಂತೆ ನೋಡಿಕೊಳ್ಳುವುದು ಸೇರಿದಂತೆ ಇತ್ಯಾದಿ ಕಾರ್ಯಗಳನ್ನು ಮಾಡಬೇಕೆಂದು ತಿಳಿಸಲಾಗಿದೆ. ಈ ಎಲ್ಲ ಕೆಲಸಗಳಿಗೆ 2ಸಾವಿರ ರೂ. ನೀಡಲಿದ್ದಾರೆಂಬ ಮಾಹಿತಿ ಇದೆ. ಆದರೆ ಇಲಾಖೆಯಿಂದ ಇದುವರೆಗೂ ಯಾವುದೇ ಆದೇಶ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಏ. 1 ರಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10ಸಾವಿರ ರೂ.ಗ್ಯಾರಂಟಿ ಗೌರವಧನ ನೀಡಲಾಗುವುದೆಂದು ಭರವಸೆ ನೀಡಿದ ಸರಕಾರ ಇದುವರೆಗೂ ಈಡೇರಿಸಿಲ್ಲ. ಈ ವರ್ಷದ ಬಜೆಟ್‍ನಲ್ಲಿ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ 1ಸಾವಿರ ರೂ.ಹೆಚ್ಚಳ ಮಾಡಿ, ಆಶಾಗಳಿಗೆ ಹೆಚ್ಚಳ ಮಾಡಲಿಲ್ಲ. ಇದೀಗ ನಡೆಯಲಿರುವ ಸಮೀಕ್ಷೆ ಕೆಲಸಕ್ಕೆ ಆಶಾಗಳಿಗೆ ಎಷ್ಟು ಗೌರವ ಧನ ನೀಡಲಿದೆ ಎಂದು ಸ್ಪಷ್ಟ ಆದೇಶವೇ ಇಲ್ಲ ಎಂದು ಅವರು ತಿಳಿಸಿದರು.

ಸಮೀಕ್ಷೆ ಮಾಡುವಷ್ಟು ದಿನಗಳ ಕಾಲ, ಚಟುವಟಿಕೆ ಆಧಾರಿತ ಪ್ರೋತ್ಸಾಹಧನಕ್ಕೆ ಕುತ್ತು ಬರುತ್ತದೆ. ಅಲ್ಲದೆ, ಈ ಗಣತಿಗೆ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ಬರಿಗೈಯಲ್ಲಿ ಮನೆಗೆ ಹೋಗುವಂತಹ ಸ್ಥಿತಿ ಬರಲಿದೆ. ಎಲ್ಲ ಕಾರಣಗಳಿಂದ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಗೌರವಧನವೂ ಇಲ್ಲದಿರುವುದರಿಂದ ಸಮೀಕ್ಷೆ ಕೆಲಸದಿಂದಲೇ ಹಿಂದೆ ಸರಿಯಲು ಆಶಾ ಕಾರ್ಯಕರ್ತೆಯರು ನಿರ್ಣಯ ಮಾಡಿದ್ದಾರೆ ಎಂದರು.

ಗ್ರಾಮೀಣ ಆಶಾ ಕಾರ್ಯಕರ್ತೆಯರಿಗೆ ಸಮೀಕ್ಷೆಯ ಕೆಲಸಕ್ಕೆ 5ಸಾವಿರ ರೂ., ನಗರ ಆಶಾ ಕಾರ್ಯಕರ್ತೆಯರಿಗೆ 10ಸಾವಿರ ರೂ.ಗಳಿಗೆ ಕಡಿಮೆ ಇರದಂತೆ ಗೌರವಧನ ನಿಗದಿ ಮಾಡಿ ಆದೇಶ ಮಾಡಬೇಕು. ಇಲ್ಲವೇ, ಸಮೀಕ್ಷೆ ಕೆಲಸಗಳಿಂದ ಕೈಬಿಡಬೇಕು. ಈ ಹಿಂದೆ ಗ್ಯಾರಂಟಿ ಯೋಜನೆಯ ಸಮೀಕ್ಷೆ ಮಾಡಿರುವುದಕ್ಕೆ ಕೊಡಬೇಕಾಗಿದ್ದ 1ಸಾವಿರ ರೂ. ಬಾಕಿ ಗೌರವಧನ ಈ ಕೂಡಲೇ ನೀಡಬೇಕೆಂದು ಒತ್ತಾಯಿಸಿದ್ದಾರೆ.

ನಿಯೋಗದಲ್ಲಿ ಜಿಲ್ಲಾ ಮುಖಂಡರುಗಳಾದ ಶೋಭಾ ಹೂಗಾರ್, ಜ್ಯೋತಿ ಲಕ್ಷ್ಮಿ, ಅಯೋಧ್ಯ, ರೇಖಾ ಹೊಸ್ಕೆರ, ಗಾಯತ್ರಿ ಬಳಿಗೆರ್, ರೇಣುಕಾ, ಸುನಿತಾ, ಲಲಿತಾ, ಅಕ್ಕಮಹಾದೇವಿ, ಮಹಾಲಕ್ಷ್ಮಿ, ಅಂಬ್ರಮ್ಮ,ರಜಿಯಾ ಬೇಗಂ, ಸವಿತಾ, ಮಕ್ಕಳಮ್ಮ ಸೇರಿದಂತೆ  ಆಶಾ ಕಾರ್ಯಕರ್ತೆಯರು ಇದ್ದರು.