“ಯಾದಗಿರಿ : ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ : ಕೆಕೆಆರ್ ಡಿಬಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಮುಖ್ಯಮಂತ್ರಿಗಳಿಂದ ಘೋಷಣೆ.! : ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿಕೆ”

Contents
“ಯಾದಗಿರಿ : ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ : ಕೆಕೆಆರ್ ಡಿಬಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಮುಖ್ಯಮಂತ್ರಿಗಳಿಂದ ಘೋಷಣೆ.! : ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿಕೆ”• ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ :ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ಬುಧುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡಲು ಹಾಗೂ ಮೇಲುಸ್ತುವಾರಿ ನೋಡಿಕೊಳ್ಳುವ ಉದ್ದೇಶದಿಂದ, ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು,ಈ ಕುರಿತು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದು ಹೇಳಿದರು.ಕೃಷ್ಣ ಮೇಲ್ದಂಡೆ ಯೋಜನೆಯ (ಯುಕೆಪಿ). ಮೂರನೇ ಹಂತದ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಪರಿಹಾರ ನಿಗದಿಮಾಡಿದೆ.ಅದರಂತೆ ಆಲಮಟ್ಟಿ ಜಲಾಶಯ 519 .ಮೀ ರಿಂದ 524 ಮೀ.ಗೆ ಎತ್ತರಿಸುವದರಿಂದ, ಎರಡೂವರೆ ಲಕ್ಷ ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. ಮುಳುಗಡೆಯಾಗುವ 75,563 ಎಕರೆ ಪ್ರದೇಶದಲ್ಲಿ ರೈತರ ನೀರಾವರಿ ಭೂಮಿಗೆ ಕನಿಷ್ಠ 40 ಲ.ರೂ ಪ್ರತಿ ಎಕರೆಗೆ ಹಾಗೂ ಒಣ ಭೂಮಿಗೆ ಎಕರೆಗೆ 30 ಲ. ರೂ. ಪಾವತಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.ಈಗಿನ ಕಲ್ಯಾಣ ಕರ್ನಾಟಕ ಭಾಗವು ಭಾರತ ಸ್ವಾತಂತ್ರ್ಯ ದ ನಂತರ ಒಂದು ವರ್ಷ,ಒಂದು ತಿಂಗಳು ಎರಡು ದಿನಗಳ ನಂತರ ವಿಳಂಬವಾಗಿ ಸ್ವಾತಂತ್ರ್ಯ ಪಡೆದಿದೆ.ಪ್ರಧಾನಿ ನೆಹರು ಅವರ ಸಂದರ್ಭದಲ್ಲಿ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ “ಆಪರೇಶನ್ ಪೋಲೋ” ಮೂಲಕ ಭಾರತದ ಒಕ್ಕೂಟಕ್ಕೆ ಆಗಿನ ಹೈದರಾಬಾದ್ ಕರ್ನಾಟಕ ಭಾಗವನ್ನು ಸೇರಿಸಲಾಯಿತು ಎಂದರು.ಹೈದರಾಬಾದ್- ಕರ್ನಾಟಕ ವಿಮೋಚನಾ ಮುಂಚೂಣಿ ಹೋರಾಟಗಾರರಾಗಿದ್ದ ರಮಾನಂದ ತೀರ್ಥರು,ಶರಣಗೌಡ ಇನಾಮದಾರ,ಸಾಗರದ ಅಚ್ಚಪ್ಪಗೌಡ ಸುಬೇದಾರ್,ಸುರಪುರದ ರಾಜಾ ವೆಂಕಟಪ್ಪ ನಾಯಕ ಇತರೆ ಹೋರಾಟಗಾರರು ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.ಸರ್ಕಾರವು ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಹಾಗೂ ಸಂವಿಧಾನ ತಿದ್ದುಪಡಿ,ಕಲಂ 371 ( ಜೆ) ರನ್ವಯ ಈ ಭಾಗದ ಅಭಿವೃದ್ಧಿಗೆ 5000 ಕೋ.ರೂಗಳನ್ನು ಒದಗಿಸಿದೆ ಎಂದು ಹೇಳಿದರು.ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಸ್ವಚ್ಛ ಭಾರತ ಹಿ ಸೇವಾ ಅಭಿಯಾನಕ್ಕೆ,ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಸ್ವಚ್ಛತೆ ಕುರಿತು ಯುವ ಜನಸೇವಾ ಹಾಗೂ ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ ನಾರಾಯಣ್ ಸ್ವಾಮಿ, ಸಂಸದ ಜಿ.ಕುಮಾರ್ ನಾಯಕ್, ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ನಗರಸಭೆ ಅಧ್ಯಕ್ಷ ಲಲಿತಾ ಅನಪುರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ್,ಅಪರ್ ಜಿಲ್ಲಾಧಿಕಾರಿ ರಮೇಶ ಕೋಲಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
