“ಶಹಾಪುರ |ಕನ್ನಡ ಜಾಗೃತಿ ಸಮಿತಿಗೆ ನೇಮಕ : ನೂತನ ಸದಸ್ಯ ಶಿಣ್ಣೂರ ಅವರಿಗೆ ಆತ್ಮೀಯರಿಂದ ಸನ್ಮಾನ”
• ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ :
ಶಹಾಪುರ : ನನಗೆ ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು,ಸಮಿತಿಯ ಆಶಯದಂತೆ ಕನ್ನಡ ಕಟ್ಟುವ ಕೆಲಸ ಮಾಡುತ್ತೇನೆ ಎಂದು ಕನ್ನಡ ಜಾಗೃತಿ ಸಮಿತಿಯ ನೂತನ ಸದಸ್ಯ ಬಸವರಾಜ ಶಿಣ್ಣೂರ ಅವರು ಹೇಳಿದರು.
ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಭಾಷಾ ನೀತಿ ಅನುಷ್ಠಾನಗೊಳಿಸುವಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು, ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ನೂತನ ಸದಸ್ಯರನ್ನಾಗಿ ನಾಮನಿರ್ದೇಶನ ಗೊಂಡ ಪ್ರಯುಕ್ತ ಗೆಳೆಯರ ಬಳಗದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕನ್ನಡ ನಾಡು – ನುಡಿ – ನೆಲ – ಜಲಗಳಿಗೆ ಧಕ್ಕೆ ಬಂದರೆ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಿ ಮುಂದಾಗಬೇಕು,ಇವುಗಳನ್ನ ಅಭಿಮಾನದಿಂದ ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆತ್ಮೀಯರು ಹಾಗೂ ಮಾತೃ ಛಾಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ತಿಪ್ಪಣ್ಣ ಕ್ಯಾತನಾಳ, ಕೆಂಭಾವಿ ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪ ಪಾಟೀಲ,ಶಿಕ್ಷಕ ರಂಗನಾಥ್ ದೊರೆ, ಸೆಕ್ಯುಲರ್ ವಾಯ್ಸ್ ಕನ್ನಡ ದಿನ ಪತ್ರಿಕೆಯ ಪ್ರಧಾನ ಸಂಪಾದಕ ಪ್ರಕಾಶ್ ದೊರೆ, ಆರ್,ವೈ,ದಿಗ್ಗಿ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಮಹೇಂದ್ರ ಕುಮಾರ್ ದಿಗ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.