BIG BREKING NEWS : “ಶಾಲೆಗಳಿಗೆ  ಅ.18 ರ ವರೆಗೆ ದಸರಾ ರಜೆ ವಿಸ್ತರಣೆ : ಜಾತಿ ಗಣತಿ ಸಮೀಕ್ಷೆ ಹಿನ್ನೆಲೆ ರಾಜ್ಯ ಸರ್ಕಾರದಿಂದ ನಿರ್ಧಾರ – ಸಿ.ಎಂ.ಸಿದ್ದರಾಮಯ್ಯ.!”

By admin

“ಶಾಲೆಗಳಿಗೆ ಅ.18 ರ ವರೆಗೆ ದಸರಾ ರಜೆ ವಿಸ್ತರಣೆ : ಜಾತಿ ಗಣತಿ ಸಮೀಕ್ಷೆ ಹಿನ್ನೆಲೆ ರಾಜ್ಯ ಸರ್ಕಾರದಿಂದ  ನಿರ್ಧಾರ- ಸಿ.ಎಂ.ಸಿದ್ದರಾಮಯ್ಯ.!

• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ : 

ಬೆಂಗಳೂರು : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಹಿನ್ನೆಲೆ ರಾಜ್ಯದ ಸರ್ಕಾರಿ ಅನುದಾನಿತ ಶಾಲೆಗಳಿಗೆ ಅ.18ರವರೆಗೆ ರಜೆ ಘೋಷಿಸಲಾಗಿದೆ.

ಸಮೀಕ್ಷೆಯ ಪ್ರಗತಿ ಸಂಬಂಧ ಮಂಗಳವಾರ ವಿಧಾನ ಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಈ ಮಾಹಿತಿ ನೀಡಿದ್ದಾರೆ.

ಸೆ.2ರಿಂದ ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಆರಂಭಗೊಂಡಿದೆ. ಸಮೀಕ್ಷೆ ಇಂದು ಮುಗಿಯಬೇಕಿತ್ತು, ಆದ್ರೆ ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿಲ್ಲ. ಕೊಪ್ಪಳದಲ್ಲಿ ಶೇ.97 ಆಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.67ರಷ್ಟು ಆಗಿದೆ. ಹೀಗಾಗಿ ಶಿಕ್ಷಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗ ಚರ್ಚೆ ನಡೆಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಪುಟ್ಟಣ ಮತ್ತು ಶಿಕ್ಷಕರ ಸಂಘ ಹೆಚ್ಚುವರಿಯಾಗಿ 10 ದಿನಗಳ ಕಾಲಾವಕಾಶ ಕೇಳಿ ಮನವಿ ಮಾಡಿದ್ದು, ಈ ಮನವಿಯನ್ನು ಪುರಸ್ಕರಿಸಿ ಅ.18ರವರೆಗೆ ದಸರಾ ರಜೆಯಲ್ಲಿರುವ ಮಕ್ಕಳಿಗೆ ಹೆಚ್ಚುವರಿಯಾಗಿ ಇನ್ನೂ 10 ದಿನ ರಜೆ ಸಿಗಲಿದೆ. ಈ ಅವಧಿಯಲ್ಲಿ ಜಾತಿಗಣತಿ ಸರ್ವೇ ಮುಗಿಸಲು ಸರ್ಕಾರ ಯೋಜಿಸಿದೆ. ಖಾಸಗಿ ಶಾಲೆಗಳಿಗೆ ರಜೆ ಅನ್ವಯಿಸುವುದಿಲ್ಲ. ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಿದ್ದೇವೆ ಅಂತ ಸಿಎಂ ತಿಳಿಸಿದರು.

  ದಸರಾ ಹಬ್ಬದ ವೇಳೆ ಗಣತಿಗೆ ಹಿನ್ನಡೆಯಾಗಿದೆ. ದಿನದ ಟಾರ್ಗೆಟ್ ರೀಚ್ ಆಗೋಕೆ ಸಾಧ್ಯ ಆಗಿಲ್ಲ. 11 ರಿಂದ 14 ಲಕ್ಷ ಮನೆಗಳ ಟಾರ್ಗೆಟ್ ಇತ್ತು. ಆಯುಧ ಪೂಜೆ ಮತ್ತು ವಿಜಯದಶಮಿ ವೇಳೆ ಗಣತಿ ಕುಂಠಿತವಾಗಿದೆ. ಇನ್ನೂ ಅ.12ರಿಂದ ದ್ವಿತೀಯ ಪಿಯು ಮಧ್ಯಂತರ ಪರೀಕ್ಷೆ ಇರುವುದರಿಂದ ಸಮೀಕ್ಷೆ ಕಾರ್ಯಗಳಿಂದ ಪಿಯುಸಿ ಉಪನ್ಯಾಸಕರಿಗೆ ವಿನಾಯಿತಿ ನೀಡಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈವರೆಗೆ 1.15 ಕೋಟಿ ಮನೆಗಳ ಸಮೀಕ್ಷೆ ಆಗಿದೆ. ಇನ್ನೂ 30 ಲಕ್ಷ ಸಮೀಕ್ಷೆ ಬಾಕಿ ಇದೆ. ಅದಕ್ಕಾಗಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ರಜೆಯ ದಿನಗಳನ್ನು ವಿಶೇಷ ತರಗತಿಗಳ ಮೂಲಕ ಸರಿದೂಗಿಸಲು ಸರ್ಕಾರ ಕ್ರಮಕೈಗೊಂಡಿದೆ. ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರು, ಸಿಎಸ್‌ ಶಾಲಿನಿ ರಜನೀಶ್ ಸೇರಿ ಹಲವರು ಭಾಗಿಯಾಗಿದ್ದರು.