BBK12>ಪರಿಸರ ನಿಯಮ ಉಲ್ಲಂಘನೆ :ಎರಡೇ ವಾರಕ್ಕೆ ಬಂದ್ ಆಯ್ತು ಬಿಗ್ ಬಾಸ್ ಮನೆ.! ಜಾಲಿವುಡ್ ಸ್ಟುಡಿಯೋ ಈಗ ಲಾಕ್.!ಇಲ್ಲಿದೆ ನೋಡಿ ಡಿಟೆಲ್ಸ್ ಸ್ಟೋರಿ.!
• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :
ಬೆಂಗಳೂರ : ಎರಡು ವಾರಗಳ ಹಿಂದೆ ಆರಂಭವಾಗಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋಗೆ ದೊಡ್ಡ ಸಂಕಷ್ಟ ಎದುರಾಗಿ ಇಂದು ಲಾಕ್ ಆಗಿದೆ. ಏಕೆಂದರೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದು ಸ್ಟುಡಿಯೋಗೆ ಬೀಗ ಹಾಕಲಾಗಿದೆ. ರಾಮನಗರ ತಹಶೀಲ್ದರ್ ತೇಜಸ್ವಿನಿ ಅವರ ಜೊತೆ ಅಧಿಕಾರಿಗಳು ತೆರಳಿ ಬೀಗ ಹಾಕಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಪ್ರೈವೆಟ್ ಲಿಮಿಡೆಟ್ ಕಂಪನಿಗೆ ಬೀಗ ಹಾಕಿದ್ದಾರೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಜಾಲಿವುಡ್ ಸ್ಟುಡಿಯೋಸ್ ಇದೆ. ಪರಿಸರ ನಿಯಮ ಉಲ್ಲಂಘನೆ ಆರೋಪದಡಿಯಲ್ಲಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ರಾಮನಗರ ತಹಶೀಲ್ದಾರ್ ಹಾಗೂ ಪೊಲೀಸರ ಸಮ್ಮುಖದಲ್ಲಿ ಬೀಗ ಜಡಿಯಲಾಗಿದೆ.
ಇದೇ ಸ್ಟುಡಿಯೋದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ನಡೆಯುತ್ತಿದೆ. 17 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ನೂರಾರು ತಂತ್ರಜ್ಞರು ಈ ರಿಯಾಲಿಟಿ ಶೋಗಾಗಿ ಕೆಲಸ ಮಾಡುತ್ತಿದ್ದಾರೆ. ಜಾಲಿವುಡ್ ಸ್ಟುಡಿಯೋದಿಂದ ಸರಿಯಾದ ರೀತಿಯಲ್ಲಿ ತಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಆಗಿಲ್ಲ ಎಂಬ ಆರೋಪ ಇದೆ. ಆದ್ದರಿಂದ ಬೀಗ ಜಡಿಯಲಾಗಿದ್ದು, ಬಿಗ್ ಬಾಸ್ ಶೋ ಬಂದ್ ಆಗುವ ಸೂಚನೆ ಕಾಣಿಸಿದೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ನೋಟಿಸ್ ಅನ್ನು ಜಾಲಿವುಡ್ ಮಾನೇಜ್ಮೆಂಟ್ ಸ್ವೀಕರಿಸಿದೆ. ಸ್ಟುಡಿಯೋದಿಂದ ಜನರನ್ನ ಕಳುಹಿಸುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ. ಅದಕ್ಕಾಗಿ ಸಂಜೆ 7.30ರವರೆಗೆ ಸಮಯ ನೀಡಲಾಗಿತ್ತು. ಅದೇ ರೀತಿ ಪೋಲಿಸರು ಮತ್ತು ಅಧಿಕಾರಿಗಳು ಬಿಗ್ ಬಾಸ್ ಮನೆ ಹೊಕ್ಕು ಬಿಗ್ ಬಾಸ್ ಸ್ಪರ್ಧಿಗಳನ್ನ ಕೂಡ ಹೊರ ಕಳಿಸಿದ್ದಾರೆ. ಇದರಿಂದಾಗಿ ರಿಯಾಲಿಟಿ ಶೋ ಸ್ಥಗಿತಗೊಳ್ಳಲಿದೆ.
“ರಾಮನಗರದ ಅಧಿಕಾರಿಗಳು ಹಿಂದೆಯೇ ನೋಟಿಸ್ ಕೊಟ್ಟಿದ್ದಾರೆ. 2024ರ ಮಾರ್ಚ್ನಲ್ಲೇ ನೋಟಿಸ್ ನೀಡಲಾಗಿತ್ತು. ಪರಿಶೀಲನೆ ವೇಳೆ ಪರವಾನಗಿ ಪಡೆದಿಲ್ಲ ಎಂಬ ಮಾಹಿತಿ ಬಂದಿದೆ. ಸ್ಟುಡಿಯೋದವರು ಪರವಾನಗಿ ಪಡೆದಿಲ್ಲ, ಅರ್ಜಿಯನ್ನೂ ಹಾಕಿಲ್ಲ. ನೋಟಿಸ್ ಕೊಟ್ಟರೂ ಅಮ್ಯೂಸ್ಮೆಂಟ್ ಪಾರ್ಕ್ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಕೋರ್ಟ್ ಮೊರೆ ಹೋಗಲು ಎಲ್ಲರಿಗೂ ಅವಕಾಶ ಇದೆ. ಕಾನೂನು ರೀತಿ ಏನು ಕ್ರಮ ವಹಿಸಬೇಕೋ ಅದನ್ನು ವಹಿಸುತ್ತೆವೆ’” • ಈಶ್ವರ ಖಂಡ್ರೆ, ಅರಣ್ಯ ಮತ್ತು ಪರಿಸರ ಖಾತೆ ಸಚಿವ


