STATE NEWS: “ಬೆಂಗಳೂರು| ಕೊನೆಗೂ ಆರ್‌ ಎಸ್‌ ಎಸ್‌ ಪಥ ಸಂಚಲನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ.! ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ: ಮತ್ತೆ RSS ವಿರುದ್ಧ “ಎಕ್ಸ್‌  ಖಾತೆಯಲ್ಲಿ ಗುಡುಗಿದ ಪ್ರಿಯಾಂಕ್ ಖರ್ಗೆ.!

By admin

 “ಬೆಂಗಳೂರು | ನ.16ರಂದು ಆರ್‌ ಎಸ್‌ ಎಸ್‌ ಪಥ ಸಂಚಲನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ : ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ:  ಮತ್ತೆ RSS ವಿರುದ್ಧ ಎಕ್ಸ್‌  ಖಾತೆಯಲ್ಲಿ ಗುಡುಗಿದ ಪ್ರಿಯಾಂಕ್ ಖರ್ಗೆ.!

• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್:

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ ಎಸ್‌ ಎಸ್‌ ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ನ.  16ರ ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರ ತನಕ ಗಣವೇಷಧಾರಿಗಳ ಪಥಸಂಚಲನಕ್ಕೆ ಹೈಕೋರ್ಟ್ ಅವಕಾಶ ಕಲ್ಪಿಸಿದೆ.

ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್‌ ಪೀಠದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಏಕ ಸದಸ್ಯ ನ್ಯಾಯಪೀಠವು, ‘ಪಥಸಂಚಲನದಲ್ಲಿ 300 ಮಂದಿ ಗಣವೇಷಧಾರಿಗಳು ಹಾಗೂ 50 ಮಂದಿ ಘೋಷ್ ವೃಂದಕ್ಕೆ ಅವಕಾಶ ನೀಡಲಾಗಿದೆ’ ಎಂದು ಆದೇಶ ನೀಡಿ ಅರ್ಜಿ ಇತ್ಯರ್ಥಗೊಳಿಸಿದರು.

ಕಳೆದ ಅ. 19ರಂದು ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನ ನಡೆಸಲು ಅನುಮತಿ ಕೋರಿತ್ತು. ಆದರೆ, ಇನ್ನೆರಡು ಸಂಘಟನೆಗಳು ಅದೇ ದಿನ ಅನುಮತಿ ಕೋರಿದ್ದರಿಂದ ಚಿತ್ತಾಪುರ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದರು. ಅದನ್ನು ಪ್ರಶ್ನಿಸಿ ಆರ್‌ಎಸ್‌ಎಸ್‌ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ ಹೈಕೋರ್ಟ್ ಮೊರೆಹೋಗಿದ್ದರು.
————————————————————–

•👉ಇದನ್ನೂ ಓದಿ..👇

 “RSS ಗೆ ಸಂವಿಧಾನದ ಬಲ ಈಗ ಅರ್ಥವಾಗಿದೆ” –‘ಎಕ್ಸ್‌’ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿ ಗುಡುಗಿದ ಸಚಿವ  ಪ್ರಿಯಾಂಕ್  ಖರ್ಗೆ.!

ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ ಎಂದು ಗುಡುಗಿದ್ದಾರೆ.

ಸಂವಿಧಾನ, ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದ ಆರ್‌ಎಸ್‌ಎಸ್‌ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ. ಯಾವುದೇ ಸಂಘಗಳು, ವ್ಯಕ್ತಿಗಳು ಇದನ್ನು ಅರ್ಥೈಸಿಕೊಂಡು ನೀತಿ, ನಿಯಮಗಳಿಗೆ ಬದ್ಧರಾಗಿ ನಡೆಯಬೇಕು’ ಎಂದು ಅವರು ತಿಳಿಸಿದ್ದಾರೆ.

ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ. ಸಂವಿಧಾನಕ್ಕೆ ತಲೆಬಾಗಿದರೆ ಮಾತ್ರ ಬದುಕು ಸುಂದರ. ಸಂವಿಧಾನಕ್ಕೆ ಸವಾಲು ಹಾಕಿದರೆ ಬದುಕು ದುಸ್ಥರ. ಆರ್‌ಎಸ್‌ಎಸ್‌ ಎಂಬ ಸಂಘಟನೆಗೆ ಈ ಸತ್ಯದ ಅರಿವಾಗಿದೆ ಎಂದು ಭಾವಿಸಿದ್ದೇನೆ’ ಎಂದು ಪ್ರಿಯಾಂಕ್ ಅವರು ‘ಎಕ್ಸ್‌’ನಲ್ಲಿ (ಟ್ವಿಟರ್) ಪೋಸ್ಟ್ ಹಂಚಿಕೊಂಡಿದ್ದಾರೆ.

‘ಸರ್ಕಾರ ಮತ್ತು ಕಲಬುರಗಿ ಜಿಲ್ಲಾಡಳಿತ ರೂಪಿಸಿರುವ ಮಾನದಂಡಗಳನ್ನು ಒಪ್ಪಿ, ನಿಯಮಗಳಿಗೆ ಅನುಸಾರವಾಗಿ ಆರ್‌ಎಸ್‌ಎಸ್‌ ತಮ್ಮ ಕಾರ್ಯಕ್ರಮ ನಡೆಸಬೇಕು ಇದರ ಹೊರತಾಗಿ ಯಾವುದೇ ಅತಿ ಬುದ್ದಿವಂತಿಕೆಗೂ ಅವಕಾಶವಿಲ್ಲ’ ಎಂದು ಖರ್ಗೆ ಕುಟುಕಿದ್ದಾರೆ.

‘ಪಥಸಂಚಲನದಲ್ಲಿ 300 ಜನರು ಮಾತ್ರ ಭಾಗವಹಿಸಬೇಕು. ಸರ್ಕಾರ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಅವಕಾಶ. ಚಿತ್ತಾಪುರದ ಹೊರಗಿನವರು ಭಾಗಿಯಾಗುವಂತಿಲ್ಲ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡುವಂತಿಲ್ಲ ಎಂಬ ಈ ನಿಯಮಗಳ ಮೂಲಕ ಸರ್ಕಾರ ತೋರಿದ ಉದಾರತೆಯನ್ನು, ಕಲಬುರಗಿ ಜಿಲ್ಲಾಡಳಿತ ತೋರಿದ ಸಹನೆಯನ್ನು ಗೌರವಿಸಿ ತಮ್ಮ ಕಾರ್ಯಕ್ರಮವನ್ನು ಪೂರೈಸಿಕೊಳ್ಳಬೇಕು. ಜೈ ಸಂವಿಧಾನ’ ಎಂದು ಖರ್ಗೆ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.