“ಯಲಬುರ್ಗಾ| ಮಹಿಳೆಗೆ ಮದ್ಯಪಾನ ಮಾಡಿಸಿ ಲೈಂಗಿಕ ದೌರ್ಜನ್ಯ: ಆರೋಪಿಗಳ ಪತ್ತೆಗೆ ಶೋಧ ತೀವ್ರ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಯಲಬುರ್ಗಾ:
ಕೊಪ್ಪಳ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿಯಲ್ಲಿ ಮಹಿಳೆಗೆ ಬಲವಂತವಾಗಿ ಮದ್ಯ ಸೇವನೆ ಮಾಡಿಸಿ, ನಾಲ್ವರು ಯುವಕರು ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿರುವುದು ಆರೋಪ ಭಾನುವಾರ ತಡ ರಾತ್ರಿ ಕೇಳಿ ಬಂದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ 39 ವರ್ಷದ ಮಹಿಳೆಯನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಹೊಸಪೇಟೆಯಿಂದ ಕುಷ್ಟಗಿಗೆ ಹಣ ಪಡೆಯಲು ಬಂದಿದ್ದ ಮಹಿಳೆಯನ್ನು ಆರೋಪಿಗಳು ಸಂಜೆ ವೇಳೆ ಬೈಕ್‌ನಲ್ಲಿ ಕರೆದೊಯ್ದು, ಮದ್ಲೂರ ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆತಂದಿರುವುದಾಗಿ ತಿಳಿದುಬಂದಿದೆ. ಅಲ್ಲಿ ಬಲವಂತವಾಗಿ ಮದ್ಯಪಾನ ಮಾಡಿಸಿ, ನಂತರ ನಾಲ್ವರೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ತೀವ್ರವಾಗಿ ಕೈಗೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಯುತ್ತಿದೆ.