“ಹುಣಸಗಿ| ಸಾಹಿತ್ಯದ ನುಡಿ ಜಾತ್ರೆ : ಜ. 9ರಂದು ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಹುಣಸಗಿ:
ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಜ.9 ರಂದು ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಇದು ಕನ್ನಡದ ಪರಂಪರೆ–ಪರಿಣಾಮಗಳನ್ನು ಹೊಸ ಪೀಳಿಗೆಗೆ ತಲುಪಿಸುವ ಮಹತ್ವದ ಸಂಸ್ಕೃತಿಕ ಹಬ್ಬವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕನ್ನಡ ನಮ್ಮ ಅಸ್ತಿತ್ವದ ಶ್ವಾಸ, ಸಂಸ್ಕೃತಿಯ ನಿತ್ಯಧಾರೆ. ಬರಹಗಾರರ ಮೌಲ್ಯ, ಕವಿಗಳ ಕಲ್ಪನೆ, ಜನಪದ ಜ್ಞಾನ – ಇವೆಲ್ಲ ಕನ್ನಡವನ್ನು ಜೀವಂತ ಭಾಷೆಯನ್ನಾಗಿ ಉಳಿಸಿವೆ. ಈ ಸಮ್ಮೇಳನವು ಯುವಪೀಳಿಗೆಯನ್ನು ಕನ್ನಡದತ್ತ ಸೆಳೆಯುವ ಸೇತುವೆಯಾಗಲಿದೆ,”ಪ್ರತಿಭಾವಂತರಿಗೆ ವೇದಿಕೆ, ಕೃತಿಗಳಿಗೆ ಓದುಗರ ಸಂಪರ್ಕ, ಸ್ಥಳೀಯ ಇತಿಹಾಸ–ಸಂಸ್ಕೃತಿಯ ಪ್ರಚಾರ—ಇವು ಸಮ್ಮೇಳನದ ಪ್ರಮುಖ ಗುರಿಗಳು ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ಹುಣಸಗಿ ಪ್ರದೇಶವು ಲಕ್ಷಾಂತರ ವರ್ಷಗಳ ಅಶ್ಯೂಲಿಯನ್ ಸಂಸ್ಕೃತಿಯ ಪ್ರಾಗೈತಿಹಾಸಿಕ ಗುರುತುಗಳನ್ನು ಹೊಂದಿದೆ ಎಂದು ಹೇಳಿದರು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಈ ಪ್ರದೇಶವನ್ನು ವಿಕ್ರಮಪುರಿ ಎಂದು ಕರೆಯಲಾಗುತ್ತಿತ್ತು. ಕೃಷ್ಣಾನದಿಯ ನೀರಾವರಿ ಈ ಪ್ರದೇಶವನ್ನು ಶ್ರೀಮಂತಗೊಳಿಸಿದ್ದು, ಕೊಡೇಕಲ್ ಬಸವಣ್ಣ, ಮುದನೂರು ದೇವರ ದಾಸಿಮಯ್ಯ, ಛಾಯಾ ಭಗವತಿ, ಹೆಬ್ಬಾಳ ಪರಮಾನಂದ ಮೊದಲಾದ ಐತಿಹಾಸಿಕ–ಸಾಂಸ್ಕೃತಿಕ ಪರಂಪರೆಗಳ ಗುರುತುಗಳು ಇಲ್ಲಿ ವಾಸ್ತವವೆಂದು ವಿವರಿಸಿದರು.
ಸಮ್ಮೇಳನದ ಮೆರವಣಿಗೆ, ಗೋಷ್ಠಿಗಳು, ಚರ್ಚಾಸತ್ರಗಳು, ಪ್ರಾಗೈತಿಹಾಸಿಕ ನಗರಿ ಹುಣಸಗಿಯ ಹಿರಿಮೆ ಮತ್ತು ಗರಿಮೆ ಯನ್ನು ಸಾರಲಿವೆ ಎಂದು ದೇಶಪಾಂಡೆ ಹೇಳಿದರು.
ತಾಲೂಕಿನ ಐತಿಹಾಸಿಕ ನುಡಿಗಟ್ಟುಗಳು ವೇದಿಕೆಗೆ ಹುಣಸಗಿ ತಾಲೂಕಿಗೆ ಸೇರಿದ ಬೂದಿಹಾಳ, ಹಗರಟಗಿ, ಕೊಡೇಕಲ್, ಮುದನೂರು, ಚನ್ನೂರು, ಅರಕೇರಾ(ಜೆ), ರಾಜನಕೋಳೂರು, ಛಾಯಾ ಭಗವತಿ, ನಾರಾಯಣಪುರ ಮೊದಲಾದ ಸ್ಥಳಗಳ ಐತಿಹಾಸಿಕ ಸಂಗತಿಗಳನ್ನು ಸಮ್ಮೇಳನದಲ್ಲಿ ವಿಶೇಷವಾಗಿ ಪ್ರಸ್ತುತಪಡಿಸಲಾಗುವುದು.
ಸಮ್ಮೇಳನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗೌರವಿಸುವುದು, ಹಾಗೂ ತಾಲ್ಲೂಕಿನ ಇತಿಹಾಸ, ಸಾಹಿತ್ಯ, ಸಂಸ್ಕೃತಿಯನ್ನು ಒಳಗೊಂಡ ಸ್ಮರಣ ಸಂಚಿಕೆ ಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ನೂರಂದಪ್ಪ ಯಾದಗಿರಿ, ಗೌರವ ಕಾರ್ಯದರ್ಶಿ ಬಸವರಾಜ ಮೇಲಿನಮನಿ, ಪ್ರಧಾನ ಕಾರ್ಯದರ್ಶಿ ಗುರು ಹುಲಕಲ್, ಜೊತೆಗೆ ಬಸವರಾಜ ಸಜ್ಜನ, ನಾಗನಗೌಡ ಪಾಟೀಲ್, ನೀಲಕಂಠ ಹೊನಕಲ್, ಡಾ. ಯೂಸೂಫ ಡೆಕ್ಕನ್, ಬಸವರಾಜ ತೆಗ್ಗೆಳ್ಳಿ, ವೆಂಕಟೇಶ ಇಸಾಂಪುರ ಹಾಗೂ ಅನೇಕ ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.