ಸರ್ಕಾರಿ ಶಾಲೆ–ಪದವಿ ಪೂರ್ವ ಕಾಲೇಜುಗಳನ್ನು ವಿಲೀನಗೊಳಿಸುವ ಮೂಲಕ ಸಾವಿರಾರು ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿಯ ಕಾರ್ಯಕರ್ತರು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಬಳಿಕ ಮುಖ್ಯಮಂತ್ರಿ ಅವರಿಗೆ ಬಿಇಒ ಮೂಲಕ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 47,493 ಸರ್ಕಾರಿ ಶಿಕ್ಷಣ ಸಂಸ್ಥೆಗಳು ಇರುವುದು, ಆದರೆ ಸರ್ಕಾರವೇ ಅಗತ್ಯ ಸೌಲಭ್ಯ ಒದಗಿಸದ ಕಾರಣ ದಾಖಲಾತಿ ಕುಸಿತ ಉಂಟಾಗಿದೆ ಎಂದು ಹೇಳಿದರು. 2015–16ರಲ್ಲಿ 47.1 ಲಕ್ಷ ದಾಖಲಾತಿ ಇದ್ದದ್ದು 2025–26ರಲ್ಲಿ 38.2 ಲಕ್ಷಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದರು.
CSR ನಿಧಿಯಲ್ಲಿ ಪ್ರಾರಂಭವಾಗುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ವೆಚ್ಚ, ಸೌಕರ್ಯ ಹಾಗೂ ಶಿಕ್ಷಕರ ವೇತನವನ್ನೂ ದಾನಿಗಳು ಭರಿಸುವ ನಿಯಮ ಸರ್ಕಾರ ಸಾರ್ವಜನಿಕ ಶಿಕ್ಷಣವನ್ನು ಖಾಸಗಿಕರಣದತ್ತ ನೂಕುತ್ತಿರುವುದಕ್ಕೆ ಉದಾಹರಣೆಯಾಗಿದೆ ಎಂದು ಅವರು ಟೀಕಿಸಿದರು.
ಈ ವೇಳೆ ಸಂಘಟನೆಯ ತಾಲೂಕು ಮುಖಂಡ ರಮೇಶ್ ಅಗಸಿಮುಂದಿನ ಮಾತನಾಡಿ, 700 ಪಂಚಾಯತ್ ಮಟ್ಟದಲ್ಲಿ KPS ಸ್ಥಾಪನೆಯನ್ನು ನೆಪ ಮಾಡಿಕೊಂಡು ಸುತ್ತಮುತ್ತಲಿನ ಶಾಲೆ/ಪಿಯು ಕಾಲೇಜುಗಳನ್ನು ವಿಲೀನಗೊಳಿಸುವ ಪ್ರಯತ್ನ ಹಳ್ಳಿಗಳ ಶಿಕ್ಷಣಕ್ಕೆ ನೇರ ಹೊಡೆತ ಎಂದು ಹೇಳಿದರು. NEP ರದ್ದು ಎಂದು ಹೇಳಿಕೊಂಡರೂ ಅದರ ಅಂಶಗಳನ್ನು ಜಾರಿಗೆ ತರುವ ಕ್ರಮ ಬಡ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಆಕ್ಷೇಪಿಸಿದರು.
ಶಾಲೆ–ಪಿಯು ಕಾಲೇಜು ವಿಲೀನಕ್ಕೆ ತಡೆ ಆಗಬೇಕು. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು ಮತ್ತು 59,000 ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು .ಇಲ್ಲದಿದ್ದರೆ ಬೃಹತ್ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹನುಮೇಶ್ ಚಳ್ಳಾರಿ, ವಿನಾಯಕ, ಅಮರೇಶ್, ಕೆಂಚಪ್ಪ, ಗಂಗಾಧರ ಹಾಗೂ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದರು.