LOCAL EXPRESS: “ಕೊಪ್ಪಳ| ಕೆಪಿಎಸ್‌ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ಯತ್ನ: ಎಐಡಿಎಸ್‌ಓ ಆರೋಪ:  ಯೋಜನೆ ಹಿಂದಕ್ಕೆ ಪಡೆಯುವಂತೆ ಆಗ್ರಹ”

By admin

“ಕೊಪ್ಪಳ| ಕೆಪಿಎಸ್‌ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ಯತ್ನ: ಎಐಡಿಎಸ್‌ಓ ಆರೋಪ:  ಯೋಜನೆ ಹಿಂದಕ್ಕೆ ಪಡೆಯುವಂತೆ ಆಗ್ರಹ”

   ಗಂಗರಾಜ ಅಳ್ಳೋಳ್ಳಿ, ಜಿಲ್ಲಾ ಸಂಚಾಲಕ, ಎಐಡಿಎಸ್ಓ

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:

ರಾಜ್ಯ ಸರ್ಕಾರವು 6000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಪ್ರಾರಂಭಿಸುವುದಾಗಿ ರಾಷ್ಟ್ರೀಯ ಶಿಕ್ಷಣ ದಿನದಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿರುವ ಹಿನ್ನೆಲೆಯಲ್ಲಿ, ಈ ಯೋಜನೆ ಸರ್ಕಾರದ “ಸರ್ಕಾರಿ ಶಾಲೆ ವಿಲೀನ-ಮುಚ್ಚುವ ನುಡಿತಂತ್ರ” ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಸರ್ಕಾರವು ಹಿಂದಿನಿಂದಲೇ ಯಾವುದೇ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದರೂ, ಇದೀಗ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಕೆಪಿಎಸ್ ಸ್ಥಾಪಿಸುವ ಹೆಸರಿನಲ್ಲಿ ಸಣ್ಣ, ಗ್ರಾಮೀಣ ಶಾಲೆಗಳ ಸಂಪನ್ಮೂಲಗಳನ್ನೇ ಕದಡುವ ಕೆಲಸ ಆರಂಭಿಸಿದೆ ಎಂದು ಸಂಘಟನೆ ಆರೋಪಿಸಿದೆ.

ಸರ್ಕಾರಿ ಶಾಲೆಗಳಿಗೆ ಹೊಸ ಹೆಸರಿಡುವುದು, ಕಟ್ಟಡ ಬಣ್ಣಿಸುವುದು ಅಥವಾ “ಮಾಡಲ್” ಎಂಬ ಲೇಬಲ್ ಜೋಡಿಸುವುದೇ ಸುಧಾರಣೆ ಅಲ್ಲ. ಪ್ರತಿಯೊಂದು ಸರ್ಕಾರಿ ಶಾಲೆಯನ್ನು ಅಗತ್ಯ ಶಿಕ್ಷಕರು, ಮೂಲಸೌಕರ್ಯ, ಕಲಿಕಾ ಸಾಮಗ್ರಿಗಳು ಹಾಗೂ ಪ್ರಜಾಸತ್ತಾತ್ಮಕ ನಿರ್ವಹಣೆಯೊಂದಿಗೆ ಬಲಪಡಿಸುವುದೇ ಸರ್ಕಾರದ ಜವಾಬ್ದಾರಿ ಎಂದು ಸಂಘಟನೆಯು ಸ್ಪಷ್ಟಪಡಿಸಿದೆ.

• ಆಂದೋಲನಕ್ಕೆ ಕರೆ :

ಕೆಪಿಎಸ್ ಯೋಜನೆಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದ ಎಐಡಿಎಸ್ಓ, ರಾಜ್ಯದ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಒಂದಾಗಿ ಸಾರ್ವಜನಿಕ ಶಿಕ್ಷಣ ರಕ್ಷಣೆಗೆ ಬಲವಾದ ಚಳುವಳಿ ನಿರ್ಮಿಸಬೇಕೆಂದು ಕರೆ ನೀಡಿದೆ.

“ಸರ್ಕಾರಿ ಶಾಲೆಗಳ ವಿಲೀನ ಅಥವಾ ಮುಚ್ಚುವಿಕೆ ಯಾವ ರೂಪದಲ್ಲೂ ಅನುಮತಿಸಲಾಗುವುದಿಲ್ಲ. ಅವುಗಳನ್ನು ಉಳಿಸಿ, ಬಲಪಡಿಸುವ ಹೋರಾಟ ಮುಂದುವರಿಯುತ್ತದೆ,” ಎಂದು ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ  ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.