“LOCAL EXPRESS: “ಸಂಡೂರ| ಬಾಲ್ಯವಿವಾಹ ತಡೆ–ಮಕ್ಕಳ ಹಕ್ಕುಗಳ ಜಾಗೃತಿ ಕುರಿತು ಶಾಲೆಗಳಲ್ಲಿ ಅಭಿಯಾನ”

By admin

“ಸಂಡೂರ|ಬಾಲ್ಯವಿವಾಹ ತಡೆ–ಮಕ್ಕಳ ಹಕ್ಕುಗಳ ಜಾಗೃತಿ ಕುರಿತು ಶಾಲೆಗಳಲ್ಲಿ ಅಭಿಯಾನ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಬಳ್ಳಾರಿ:

 ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಹೊಸ ಮಾದಾಪುರ ಮತ್ತು ಹಳೆ ಮಾದಾಪುರ ಸರಕಾರಿ ಕಿರಿಯ–ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಬಾಲ್ಯವಿವಾಹ ನಿಷೇಧ ಕುರಿತ ಜಾಗೃತಿ ಅಭಿಯಾನವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ರೀಡ್ಸ್ ಸಂಸ್ಥೆ–ಬಳ್ಳಾರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ರೀಡ್ಸ್ ಸಂಸ್ಥೆಯ ತಿಪ್ಪೇಸ್ವಾಮಿ ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ–2006, ಇತ್ತೀಚಿನ ತಿದ್ದುಪಡಿಗಳು ಹಾಗೂ ಪೋಕ್ಸೊ ಕಾಯ್ದೆ ಕುರಿತು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಜಾಗೃತಿ ಮೂಡಿಸಿದರು.

ಮಕ್ಕಳ ಹಕ್ಕುಗಳ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿರುವ ಮತ್ತು ಅಭಿಯಾನದ ಸಂಚಾಲಕರಾದ ಮತ್ತು ಸಂವಿಧಾನ ಸಂಗಾತಿಗಳಾದ  ರಿಯಾಜ್ ಸಿಹಿಮೊಗೆ ಹಾಗೂ ಅಂಕ್ಲೇಶ ಪಿಕೆಹಳ್ಳಿ ಅವರು ಹಾಡು, ಕಿರು ನಾಟಕ, ಕಥಾವಸ್ತು ಮತ್ತು ಸಂವಾದಗಳ ಮೂಲಕ ಮಕ್ಕಳಲ್ಲಿ ಹಕ್ಕು ಮತ್ತು ರಕ್ಷಣಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. ಸಾಂಸ್ಕೃತಿಕ ಶಿಕ್ಷಣ ಶೈಲಿಯ ಮೂಲಕ ಮಕ್ಕಳ ಆಸಕ್ತಿ ಹೆಚ್ಚುವಂತೆ ಗಟ್ಟಿ ಸಂದೇಶವನ್ನು ಹರಡುವ ಪ್ರಯತ್ನ ನಡೆಯಿತು.

ಕಾರ್ಯಕ್ರಮದಲ್ಲಿ ಹಳೆ ಮಾದಾಪುರ ಶಾಲೆಯ ಮುಖ್ಯಶಿಕ್ಷಕ ರಾಜೇಶ್, ಹೊಸ ಮಾದಾಪುರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸವಿತಾ, ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.