LOCAL EXPRESS :”ಕೊಪ್ಪಳ| ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ : ನ.25ರಂದು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಿಂಧನೂರಿನಲ್ಲಿ ಜೆಡಿಎಸ್‌ ಬೃಹತ್ ಪ್ರತಿಭಟನೆ”

By admin

“ಕೊಪ್ಪಳ| ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ : ನ.25ರಂದು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಿಂಧನೂರಿನಲ್ಲಿ ಜೆಡಿಎಸ್‌ ಬೃಹತ್ ಪ್ರತಿಭಟನೆ” 

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಇದೇ  ನ. 25 ರಂದು ಜಾತ್ಯಾತೀತ ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ಕೆಓಎಫ್ ರಾಜ್ಯಾಧ್ಯಕ್ಷ ವೆಂಕಟರಾವ್ ನಾಡಗೌಡ ಅವರು ಹೇಳಿದರು.

 ಬುಧುವಾರ ನಗರದ ಜಾತ್ಯತೀತ ಜನತಾದಳ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹಣೆ ಇದ್ದರೂ ಸರ್ಕಾರ ಐಸಿಸಿ ಸಭೆಯಲ್ಲಿ ‘ನೀರು ಲಭ್ಯವಿಲ್ಲ’ ಎಂದು ಹೇಳಿರುವುದು ರೈತರಿಗೆ ತೀರಾ ಅನ್ಯಾಯ. ಭತ್ತ ಖರೀದಿ ಕೇಂದ್ರಗಳನ್ನು ತೆರೆಯದ ಸರ್ಕಾರ ಬೆಳೆ ಹಾನಿ ಪರಿಹಾರವನ್ನೂ ಬಿಡುಗಡೆ ಮಾಡದಿರುವುದು ಖಜಾನೆ ಬಿಕೋ ಎನಿಸುವಂತಿದೆ,” ಎಂದರು.

ಜಾತ್ಯತೀತ ಜನತಾದಳವು ಈ ಅನ್ಯಾಯದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಕಾರ್ಯಕರ್ತರು ಹಾಗೂ ರೈತರು ಹೆಚ್ಚೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಬೇಕೆಂದು ಅವರು ಕೋರಿದರು.

ಎರಡನೇ ಬೆಳೆಗೆ ನೀರು ನೀಡದ ರಾಜ್ಯ ಸರ್ಕಾರದ ವಿರುದ್ಧ ಸಿಂಧನೂರು ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಬೆಳೆ ಹಾನಿ ಪರಿಹಾರವನ್ನು ರಾಜ್ಯ ಸರ್ಕಾರ ರೈತರ ಖಾತೆಗೆ ಜಮಾ ಮಾಡದಿರುವುದು “ನಾಚಿಕೆಗೇಡಿನ ಸಂಗತಿ” ಎಂದು ಅವರು ಗಂಭೀರವಾಗಿ ಟೀಕಿಸಿದರು.

• ಪಕ್ಕದ ರಾಜ್ಯದೊಂದಿಗೆ ಹೋಲಿಕೆ: ಕರ್ನಾಟಕದಲ್ಲಿ ರೈತ ನಿರ್ಲಕ್ಷ್ಯ:

ತೆಲಂಗಾಣದಲ್ಲಿ ರೈತರಿಗೆ 2,374 ರೂ. ಬೆಂಬಲ ಬೆಲೆಗೆ 500 ರೂ. ಹೆಚ್ಚುವರಿ ನೀಡಿ ಖರೀದಿ ಕೇಂದ್ರಗಳನ್ನು ಆರಂಭಿಸಿರುವುದನ್ನು ಉದಾಹರಿಸಿ, “ಕರ್ನಾಟಕದಲ್ಲಿ ಇಂತಹ ಯೋಚನೆಯನ್ನಾದರೂ ಮಾಡಿಲ್ಲ. ರೈತಪರ ನಿಲುವಿನ ಕೊರತೆಯನ್ನು ಸರ್ಕಾರದ ಕಾರ್ಯವೈಖರಿ ಸ್ಪಷ್ಟಪಡಿಸುತ್ತದೆ,” ಎಂದು ನಾಡಗೌಡ ಟೀಕಿಸಿದರು.

“ಸರ್ಕಾರಕ್ಕೆ ಸ್ವಲ್ಪಮಾನ ಮರ್ಯಾದೆ ಇದ್ದರೆ ಕೂಡಲೇ ಬೆಂಬಲ ಬೆಲೆಯ ಮೇಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು,” ಎಂದು ಅವರು ಆಗ್ರಹಿಸಿದರು.

ಎರಡನೇ ಬೆಳೆಗೆ ನೀರು ನೀಡುವ ಭರವಸೆ ಸರ್ಕಾರ ನೀಡುವುದೇ ರೈತರ ಬದುಕಿಗೆ ತುಸು ನಂಬಿಕೆ ನೀಡುವ ಕ್ರಮವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. “ನೀರು ಇಲ್ಲ” ಎಂಬ ಹೇಳಿಕೆ ರೈತರ  ಜೀವನವನ್ನು ಕುಂದಿಸುವ ನಿರ್ಧಾರ ಕ್ರಮವಾಗುತ್ತದೆ, ಎಂದು ನಾಡಗೌಡ ಅವರು ಗಟ್ಟಿಯಾಗಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಜೆಡಿಎಸ್‌ ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್, ಶಾಸಕ ನೇಮಿರಾಜ ನಾಯಕ ಮತ್ತು ಮುಖಂಡರಾದ  ಸುರೇಶ್ ಭೂಮರೆಡ್ಡಿ, ಮಲ್ಲನಗೌಡ ಕೋನನಗೌಡರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.